ದಾವಣಗೆರೆ: ಹೋರಿ ಬೆದರಿಸುವ ಸ್ಪರ್ಧೆ ವೇಳೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಇತರರ ಮೇಲೆ ಹೋರಿಯೊಂದು ನುಗ್ಗಿದ ಘಟನೆ ಹೊನ್ನಾಳಿ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ನಡೆದಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ಹೋರಿ ಬೆದರಿಸುವ ಸ್ಪರ್ಧೆಯನ್ನು ಪ್ರತಿವರ್ಷ ದೊಡ್ಡೇರಿ ಗ್ರಾಮದಲ್ಲಿ ಆಯೋಜಿಸಲಾಗುತ್ತದೆ. ಇದನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮದ ಜನರು ಆಗಮಿಸುತ್ತಾರೆ. ಈ ಸ್ಪರ್ಧೆ ಅತ್ಯಂತ ವಿಜೃಂಭಣೆಯಿಂದ ನೆರವೇರುತ್ತದೆ. ಈ ವರ್ಷವೂ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸೇರಿ ಬಿಜೆಪಿಯ ನಾಯಕರು ಪಾಲ್ಗೊಂಡಿದ್ದರು.
ಈ ವೇಳೆ ದಿಢೀರ್ನೇ ಹೋರಿವೊಂದು ಮೈಮೇಲೆ ನುಗ್ಗಿದ ಪರಿಣಾಮ ರೇಣುಕಾಚಾರ್ಯ, ದಾವಣಗೆರೆ ಜಿಲ್ಲಾ ಪಂಚಾಯತ್ ಪ್ರಭಾರ ಅಧ್ಯಕ್ಷ ಸುರೇಂದ್ರ ನಾಯ್ಕ್, ಹೊನ್ನಾಳಿ ಬಿಜೆಪಿ ಮಂಡಲದ ಅಧ್ಯಕ್ಷ ಜೆ. ಕೆ. ಸುರೇಶ್, ಶಿವ ಹುಡೇದ್, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಮಂಜುನಾಥ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.