ದಾವಣಗೆರೆ : ಮಹಿಳೆಯರೊಂದಿಗೆ ಅಶ್ಲೀಲವಾಗಿ ವಿಡಿಯೋ ಮಾಡಿ ಬೆದರಿಸಿ ಬಲವಂತವಾಗಿ ವ್ಯಕ್ತಿಯೊಬ್ಬನ ಬಳಿ ಒಂದೂವರೆ ಲಕ್ಷ ರೂ ಪೀಕಿ ಮೋಸ ಮಾಡಿದ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಈ ಘಟನೆ ದಾವಣಗೆರೆ ವಿದ್ಯಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ಸಂಬಂಧ ವಿದ್ಯಾನಗರ ಪೊಲೀಸರು ನಾಲ್ವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಹರೀಶ, ಚಂದ್ರು, ಗಂಗಮ್ಮ ಹಾಗೂ ಗಿಡ್ಡ ಗಂಗಮ್ಮ ಬಂಧಿತರು. ಇವರು ದಾವಣಗೆರೆ ವಾಸಿಗಳಾಗಿದ್ದಾರೆ. ಇವರನ್ನು ಬಂಧಿಸಿ ಆರೋಪಿಗಳಿಂದ ಒಟ್ಟು 1,30,000 /- ರೂಗಳನ್ನು ವಶಪಡಿಸಿಕೊಂಡಿದ್ದಾರೆ. ಶಿವಕುಮಾರ್ ಮೋಸಕ್ಕೊಳಗಾದ ವ್ಯಕ್ತಿ ಎಂದು ಎಸ್ಪಿ ಸಿಬಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.
30 ಲಕ್ಷ ದುಡ್ಡಿಗೆ ಡಿಮ್ಯಾಂಡ್: ಈ ಬಗ್ಗೆ ಮಾತನಾಡಿರುವ ಅವರು, ’’ಇದು ಹಾನಿಟ್ರ್ಯಾಪ್ ಕೇಸ್ ಆಗಿದೆ. ದಾವಣಗೆರೆಯ ಚನ್ನಗಿರಿ ತಾಲೂಕಿನ ನಿವಾಸಿ ಶಿವಕುಮಾರ್ (45) ಎಂಬ ವ್ಯಕ್ತಿಗೆ ಗಂಗಮ್ಮ ಎಂಬವರು ಪೋನ್ ಕಾಂಟ್ಯಾಕ್ಟ್ ಮಾಡಿಕೊಂಡು ಪರಿಚಯ ಬೆಳೆಸಿಕೊಂಡಿದ್ದಾರೆ. ಹೀಗೆ ಸ್ವಲ್ಪ ಹಣ ಬೇಕಾಗಿದೆ ಎಂದು ಹೇಳಿಕೊಂಡು ದುಡ್ಡನ್ನು ತೆಗೆದುಕೊಳ್ಳುತ್ತಾರೆ. ಅದಾದ ಮೇಲೆ ಸಂತ್ರಸ್ತ ವ್ಯಕ್ತಿ ಸಿಟಿಗೆ ಬರುತ್ತಿದ್ದಾನೆ ಎಂಬುದನ್ನು ತಿಳಿದುಕೊಂಡು, ಅವತ್ತಿನ ದಿನ ನಮ್ಮ ಮನೆ ಇಲ್ಲೇ ಸಿದ್ದರವೀರಪ್ಪ ಬಡಾವಣೆಯಲ್ಲಿದೆ ಎಂದು ಹೇಳಿ ಮನೆಗೆ ಕರೆಸಿಕೊಂಡಿದ್ದಾರೆ. ನಂತರ ಅವನನ್ನು ರೂಮಿಗೆ ಕರೆದುಕೊಂಡು ಹೋಗಿ ಬಟ್ಟೆಬಿಚ್ಚುವಂತೆ ಮಾಡಿದ್ದಾರೆ. ಅವರಿಬ್ಬರು ಇರುವಾಗ ಪಕ್ಕದ ರೂಮಿನಿಂದ ಇಬ್ಬರು ಹುಡುಗರು ಬಂದು ಸಡನ್ ಆಗಿ ವಿಡಿಯೋ ಮಾಡಿಕೊಂಡು ಬ್ಲಾಕ್ಮೇಲ್ ಮಾಡಿ 30 ಲಕ್ಷಕ್ಕೆ ದುಡ್ಡಿಗೆ ಡಿಮ್ಯಾಂಡ್ ಇಟ್ಟಿದ್ದಾರೆ. ನಂತರ ಇವನ ಬಳಿ ಅಷ್ಟು ಹಣವಿಲ್ಲ ಎಂಬುದನ್ನ ತಿಳಿದುಕೊಂಡು ಅಂತಿಮವಾಗಿ 1,50,000 ರೂ ತೆಗೆದುಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಈ ವಿಷಯದ ಬಗ್ಗೆ ನಮಗೆ ಕಂಪ್ಲೇಂಟ್ ಬಂದ ಮೇಲೆ, ವಿಚಾರಣೆ ನಡೆಸಿ ನಾವು ಒಟ್ಟಾರೆ ನಾಲ್ಕು ಜನರನ್ನು ಅರೆಸ್ಟ್ ಮಾಡಿದ್ದೇವೆ‘‘ ಎಂದು ಎಸ್ ಪಿ ರಿಷ್ಯಂತ ಹೇಳಿದ್ದಾರೆ.
ದುಡ್ಡು ಕಿತ್ತುಕೊಳ್ಳುವ ಪ್ಲಾನ್: ಇದರಲ್ಲಿ ಮುಖ್ಯವಾಗಿ ಗಂಗಮ್ಮ ಎಂಬ ಹೆಂಗಸು ಪೋನ್ ಮಾಡಿ ಕರೆಸಿಕೊಂಡಿರುವವರಾಗಿರುತ್ತಾರೆ. ಇನ್ನೊಂದು ಮಹಿಳೆ ಹೆಸರು ಗಿಡ್ಡ ಗಂಗಮ್ಮ ಎಂದು. ಗಂಗಮ್ಮ ಎಂಬುವವರದ್ದು ಚೆನ್ನಗಿರಿ ತಾಲೂಕಾದರೆ, ಗಿಡ್ಡ ಗಂಗಮ್ಮ ಎಂಬುವವರದ್ದು ದಾವಣಗೆರೆ ತಾಲೂಕು. ಮತ್ತೆ ಪಕ್ಕದ ರೂಮಿನಿಂದ ಬಂದವರು ಹರೀಶ್ ಹಾಗೂ ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಈ ಹರೀಶ್ ಟೈಲ್ಸ್ ಬುಸಿನೆಸ್ ಮಾಡ್ತಾನೆ. ಇನ್ನು ಚಂದ್ರಶೇಖರ್ ಎಂಬಾತ ಆಟೋ ಕನ್ಸಲ್ಟೆನ್ಸಿ ನಡೆಸುತ್ತಿದ್ದಾನೆ. ಈ ಎಲ್ಲರೂ ಜನ ಸೇರಿ ಹನಿಟ್ರ್ಯಾಪ್ ಮಾಡಿಸಿ ದುಡ್ಡು ಕಿತ್ತುಕೊಳ್ಳುವ ಪ್ಲ್ಯಾನ್ ಮಾಡಲಾಗಿತ್ತು. ಈಗ ಎಲ್ಲರೂ ಅರೆಸ್ಟ್ ಆಗಿದ್ದಾರೆ. ಉಳಿದಂತೆ ಸಮಗ್ರ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ರಿಷ್ಯಂತ್ ಸಂಪೂರ್ಣ ಮಾಹಿತಿ ನೀಡಿದರು.
ಪ್ರಕರಣ ತನಿಖೆ ಮುಂದುವರೆದಿದೆ- ಸಿಬಿ ರಿಷ್ಯಂತ್: ಈ ರೀತಿಯ ಹನಿಟ್ರ್ಯಾಪ್ ಕೇಸ್ಗಳು ಮೊದಲೇ ಪ್ರೀಪ್ಲಾನ್ಡ್ ಆಗಿರುತ್ತವೆ. ನಂತರ ರೂಮ್ಗೆ ಕರೆಸಿಕೊಂಡು ವಿಡಿಯೋ ಮಾಡಿಕೊಳ್ಳುತ್ತಾರೆ. ನಂತರ ಇಬ್ಬರು ಸಿಲುಕಿಕೊಳ್ಳುತ್ತೇವೆ ಎಂದು ಹೆದರಿಸಿ ಹಣವನ್ನು ಕಿತ್ತುಕೊಳ್ಳುವ ಪ್ಲಾನ್ ಇದಾಗಿರುತ್ತದೆ. ಆರೋಪಿತರಿಂದ ಒಟ್ಟು 1,30,000/- ರೂಗಳನ್ನು ವಶಪಡಿಸಿಕೊಳ್ಳುವ ಮೂಲಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನು ಈ ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಎಸ್ಪಿ ಸಿಬಿ ರಿಷ್ಯಂತ್ ಮಾಹಿತಿ ನೀಡಿದರು.
ಇದನ್ನೂ ಓದಿ : ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಲು ಸಹಕಾರ ಆರೋಪ : 16 ಶಿಕ್ಷಕರು ಅಮಾನತು