ದಾವಣಗೆರೆ: ಇದು ಸಾರ್ವಜನಿಕರ ಆಸ್ತಿ, ಗೂಂಡಾಗಿರಿ, ವಾಮ ಮಾರ್ಗದ ಮೂಲಕ ಬಂದರೆ ಏನೂ ಮಾಡಲು ಆಗದು ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ಏಕ ವಚನದಲ್ಲೇ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರೇವಣ್ಣ ಕೈಯಲ್ಲಿ ಏನೂ ಮಾಡಲಾಗದು, ಯಡಿಯೂರಪ್ಪ ಬಗ್ಗೆ ಹುಚ್ಚು ಹೇಳಿಕೆ ಕೊಡುವ ರೇವಣ್ಣರಿಗೆ ಜನರೇ ಪಾಠ ಕಲಿಸಲಿದ್ದಾರೆ. ನಿಂಬೆಹಣ್ಣು, ವಾಮ ಮಾರ್ಗದಿಂದ ಅಧಿಕಾರ ಉಳಿಸಿಕೊಳ್ಳಲು ಮುಂದಾದ ರೇವಣ್ಣರಿಗೆ ತಾಕತ್ತಿದ್ದರೆ ಬರಲಿ, ನಾವೂ ನೋಡುತ್ತೇವೆ ಎಂದು ತಿರುಗೇಟು ನೀಡಿದರು.
ಇನ್ನು ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಈ ಬಗ್ಗೆ ಆಸಕ್ತಿಯೂ ಇಲ್ಲ. ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಪಕ್ಷ ಟಿಕೆಟ್ ಕೊಟ್ಟಿದೆ. ಮೂರು ಬಾರಿ ಶಾಸಕನಾಗಿದ್ದೇನೆ. ಎರಡು ಬಾರಿ ನಿಗಮ ಮಂಡಳಿ ಅಧ್ಯಕ್ಷನಾಗಿದ್ದೇನೆ. ಮಂತ್ರಿಯಾಗಿದ್ದೇನೆ. ನನಗೆ ತೃಪ್ತಿ ಇದೆ. ಜೀವನದಲ್ಲಿ ಅವಕಾಶವಾದಿ ರಾಜಕಾರಣ ಮಾಡಲ್ಲ. ಯಾರು ಮಾಡಿದ್ದಾರೆ ಎಂಬುದನ್ನು ಚುನಾವಣೆ ಫಲಿತಾಂಶದ ಬಳಿಕ ಮಾತನಾಡುತ್ತೇನೆ ಎಂದು ಹೇಳಿದರು. ಇನ್ನು ರಾಜ್ಯದಲ್ಲಿ ಜನಪ್ರತಿನಿಧಿಗಳು ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಲುಕಿರುವ ಬಗ್ಗೆ ರೇಣುಕಾಚಾರ್ಯ ಕೇಳುತ್ತಿದ್ದಂತೆ "ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ, ನೋ ಕಾಮೆಂಟ್ಸ್' ಎಂದು ಹೇಳಿ ನಡೆದರು.