ದಾವಣಗೆರೆ : ಮೃತ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಸಾವಿನ ಪ್ರಕರಣದಲ್ಲಿ ಸಾಕಷ್ಟು ಸಂಶಯಗಳಿವೆ. ಇದರಲ್ಲಿ ಕಾಣದ ಕೈಗಳ ವ್ಯವಸ್ಥಿತವಾದ ಸಂಚಿದೆ. ಸಿಎಂ ಬಸವರಾಜ್ ಬೊಮ್ಮಾಯಿಯವರೇ ಮೊದಲು ಈಶ್ವರಪ್ಪನವರ ರಾಜೀನಾಮೆ ಪಡೆಯಿರಿ, ತನಿಖೆ ನಡೆಸಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರು ಒತ್ತಾಯಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಮಾತನಾಡಿ ಅವರು, ಈ ಪ್ರಕರಣದಲ್ಲಿ ನಾನು ಯಾರಿಗೂ ಸರ್ಟಿಫಿಕೇಟ್ ಕೊಡುವುದಿಲ್ಲ. ಇದರಲ್ಲಿ ಸರ್ಕಾರದ ತಪ್ಪು ಕೂಡ ಇದೆ. ತನಿಖೆ ನಡೆಸಿ ಈ ಪ್ರಕರಣದ ಹಿಂದೆ ಇರುವ ಸತ್ಯಾಸತ್ಯತೆ ಹೊರ ಬರಲಿದೆ. ಇನ್ನು ಕೆ ಎಸ್ ಈಶ್ವರಪ್ಪ ಅವರು ಹಠಕ್ಕೆ ಬೀಳದೆ ರಾಜೀನಾಮೆ ಕೊಡುವುದು ಸೂಕ್ತ. ರಾಜೀನಾಮೆ ಕೊಟ್ಟ ನಂತರ ಇವರ ಪಾತ್ರದ ಬಗ್ಗೆ ಅವರೇ ಸಾಬೀತುಪಡಿಸಬೇಕು ಎಂದರು.
ವರ್ಕ್ ಆರ್ಡರ್ ಇಲ್ಲದೇ ₹4 ಕೋಟಿ ಕೆಲಸ ಮಾಡಲು ಬಿಟ್ಟವರಾರು?
ನಾಲ್ಕು ಕೋಟಿ ಕೆಲಸವನ್ನು ವರ್ಕ್ ಆರ್ಡರ್ ಇಲ್ಲದೇ ಕೆಲಸ ಮಾಡೋಕೆ ಬಿಟ್ಟವರಾರು ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ವರ್ಕ್ ಆರ್ಡರ್ ಪರ್ಮಿಶನ್ ಕೊಟ್ಟವರು ಯಾರು ಎಂಬುದು ಕೂಡ ತನಿಖೆಯಾಗಬೇಕು. ಈ ಬಗ್ಗೆ ಸಂತೋಷ್ ನಿನ್ನೆ ಉಡುಪಿಗೆ ಹೋದಾಗ ಇವರ ಜೊತೆಯಲ್ಲಿ ಇಬ್ಬರು ಸ್ನೇಹಿತರು ಹೋಗಿದ್ದರು.
ಅವರು ಹೋಗಿದ್ದು ಡೆತ್ ನೋಟ್ ವಾಟ್ಸ್ಆ್ಯಪ್ನಲ್ಲಿ ಬರೆದಿರುವುದು ಮೇಲ್ನೋಟಕ್ಕೆ ಸಂಶಯಕ್ಕೆ ಎಡೆ ಮಾಡಿದೆ. ಈಶ್ವರಪ್ಪ ರಾಜೀನಾಮೆ ಕೊಡುವುದು ಅನಿವಾರ್ಯ. ಸರ್ಕಾರ ಯುವಕನ ಸಾವಿಗೆ ಕಾರಣವೇನು ಎಂಬುದು ಹಾಗೂ ವಾಸ್ತವಾಂಶ ಏನಿದೆ ಎಂಬುದರ ಸತ್ಯಾಂಶ ಹೊರ ಬರದಿದ್ದರೆ ಬಿಜೆಪಿ ಸರ್ಕಾರಕ್ಕೂ ಕಷ್ಟ ಎಂದರು.
ಕಾಂಗ್ರೆಸ್ನವರು ಮಲಗಿದ್ದವರು ಎದ್ದಿದ್ದಾರೆ
ಈಶ್ವರಪ್ಪ ಅವರು ಮೊದಲು ರಾಜೀನಾಮೆ ಕೊಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ. ಕಾಂಗ್ರೆಸ್ ಪಕ್ಷದವರು ಮಲಗಿದ್ದವರು ಎದ್ದಿದ್ದಾರೆ. ನನಗೆ ಒಂದು ಡೌಟ್ ಇದೆ. ಪ್ರಕರಣ ನಡೆದು ಅರ್ಧ ಮುಕ್ಕಾಲು ಗಂಟೆಯಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಕರೆ ನೀಡಿದೆ. ರಾಜ್ಯಾದ್ಯಂತ ಕೈ ಕಾರ್ಯಕರ್ತರು ಮುಗಿಬೀಳುತ್ತಿದ್ದಾರೆ. ಇನ್ನು ಈ 40 ಪರ್ಸೆಂಟೇಜ್ ಬಗ್ಗೆ ಮೂರು ತಿಂಗಳ ಹಿಂದೆ ನಮಗೆ ಗೊತ್ತಾಗಿತ್ತು. ಇದರ ಬಗ್ಗೆ ಸಿದ್ದರಾಮಯ್ಯ, ಡಿಕೆಶಿ, ಶಿವಕುಮಾರ್ಗೂ ಗೊತ್ತಾ? ಎಂದು ಕಾಂಗ್ರೆಸ್ ಮುಖಂಡರಿಗೆ ಕುಮಾರಸ್ವಾಮಿ ಟಾಂಗ್ ನೀಡಿದರು.
ಓದಿ: 'ಬೇನಾಮಿ ಅಧ್ಯಕ್ಷೆ-ಮಹಾನಾಯಕ' ಸೃಷ್ಟಿಸಿದ ಮಹಾಕೈವಾಡವೇ.. ಸಂತೋಷ್ ಕೇಸ್ ಕಾಂಗ್ರೆಸ್ ಟೂಲ್ ಕಿಟ್ ಭಾಗ : ಬಿಜೆಪಿ ಆರೋಪ