ದಾವಣಗೆರೆ: ಅದು ಕರ್ನಾಟಕದ ಕಾಟನ್ ಮ್ಯಾಂಚೆಸ್ಟರ್ ಎಂದು ಪ್ರಸಿದ್ಧಿ ಪಡೆದಿರುವ ನಗರ. ಜೊತೆಗೆ ಬೆಣ್ಣೆನಗರಿ ಎಂಬ ಬಿರುದು ಪಡೆದಿರುವ ದಾವಣಗೆರೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಬೃಹದಾಕಾರವಾಗಿ ಬೆಳೆದು ನಿಂತಿವೆ. ವೈದ್ಯಕೀಯ ಶಿಕ್ಷಣ ಸೇರಿದಂತೆ ಉನ್ನತ ಶಿಕ್ಷಗಳು ಹೆಚ್ಚಾಗಿವೆ. ಖಾಸಗಿ ಶಾಲೆಗಳು ಒಂದಕ್ಕಿಂತ ಒಂದು ನಾ ಮುಂದು ತಾ ಮುಂದು ಎಂಬಂತೆ ಹಲವು ಸೌಲಭ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಸೆಳೆಯುತ್ತಿವೆ. ಆದರೆ ಈ ನಗರದಲ್ಲಿ ಸರ್ಕಾರಿ ಶಾಲೆಯೊಂದು ಯಾವುದೇ ಸೌಲಭ್ಯಗಳಿಲ್ಲದೆ ಸೊರಗಿದೆ.
ಬಡ ಮಕ್ಕಳ ಭವಿಷ್ಯಕ್ಕೆ ಬೀಳದಿರಲಿ ಕೊಡಲಿ ಪೆಟ್ಟು.. ಹೌದು, ಎಸ್ಪಿಎಸ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಲಭೂತ ಸೌಕರ್ಯ ಕೊರತೆಯಿಂದ ವಿದ್ಯಾರ್ಥಿಗಳು ಹಲವು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇದು ಶಾಲೆಯೋ ಪಾಳುಬಿದ್ದಿರುವ ಜಾಗವೋ ಎಂಬಂತೆ ಭಾಸವಾಗುತ್ತಿದೆ. ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಖರ್ಚು ಮಾಡುವ ಹಣ ಎಲ್ಲಿ ಹೋಗುತ್ತೆ ಎಂಬ ಅನುಮಾನ ಕಾಡುತ್ತಿದೆ.
ಜಿಲ್ಲಾ ಕೇಂದ್ರದಲ್ಲಿದ್ದರೂ ಇದೆಂಥ ಅವ್ಯವಸ್ಥೆ.. ಗ್ರಾಮೀಣ ಭಾಗದಲ್ಲಿರುವ ಬಹತೇಕ ಸರ್ಕಾರಿ ಶಾಲೆಗಳು ಸುಸ್ಥಿತಿಯಲ್ಲಿವೆ. ಆದ್ರೆ ಜಿಲ್ಲಾ ಕೇಂದ್ರದಲ್ಲಿರುವ ಎಸ್ಪಿಎಸ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪರಿಸ್ಥಿತಿ ಹೀಗಿದ್ದರೆ ಬಡ ಮಕ್ಕಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ಬಿದ್ದಂಗೆ ಆಗಲಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಶಾಲೆಯತ್ತ ಕಣ್ತೆರೆದು ನೋಡಬೇಕಿದೆ.
ಶಾಲೆಯ ದುಸ್ಥಿತಿ, ಮಕ್ಕಳಿಗೆ ಆತಂಕದ ಸ್ಥಿತಿ.. ಶಾಲೆಯ ಕೊಠಡಿಗಳ ಛಾವಣಿ ಬೀಳುವ ಹಂತ ತಲುಪಿದ್ದು, ಗೋಡೆಗಳು ಬಿರುಕು ಬಿಟ್ಟಿವೆ, ಅಡುಗೆ ಮನೆ ಕುಸಿದು ಬಿದ್ದಿದೆ. ಶೌಚಾಲಯ ದುಸ್ಥಿತಿಗೆ ತಲುಪಿದೆ. ಇದರಿಂದ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ ಇದೇ ಶಾಲೆಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಪ್ರಸ್ತುತ ಈ ಸಂಖ್ಯೆ 86ಕ್ಕೆ ಇಳಿಕೆಯಾಗಿದೆ ಎನ್ನುತ್ತಾರೆ ಪೋಷಕ ಲಿಂಗರಾಜ್.
ಪುಂಡ ಪೋಕರಿಗಳಿಗೆ ದುಶ್ಚಟಗಳ ಅಡ್ಡಾ.. ಈ ಶಾಲೆಯ ಕಂಪೌಂಡ್ ಸಂಪೂರ್ಣ ಹಾಳಾಗಿರುವುದರಿಂದ ರಾತ್ರಿಯಾಗುತ್ತಿದ್ದಂತೆ ಕೆಲ ಪುಂಡ ಪೋಕರಿಗಳು ಒಳಗೆ ಬಂದು ಆವರಣದಲ್ಲಿ ಮದ್ಯ ಸೇವಿಸಿ ಬಾಟಲ್ಗಳನ್ನು ಎಲ್ಲೆಂದರಲ್ಲಿ ಎಸೆದು, ಗುಟ್ಕ ಉಗಿದು ಶಾಲೆಯನ್ನು ಅನೈತಿಕ ಚಟುವಟಿಕೆಗಳ ತಾಣ ಮಾಡಿಕೊಂಡಿದ್ದಾರೆ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪಿಸುತ್ತಿದ್ದಾರೆ.
ಬೇಕಿದೆ ಸೂಕ್ತ ಕ್ರಮ.. ಶಿಕ್ಷಣ ಇಲಾಖೆ ಈ ಶಾಲೆಯನ್ನು ಅನೈತಿಕ ಚಟುವಟಿಕೆ ತಾಣವನ್ನಾಗಿ ಮಾಡಿಕೊಂಡಿರುವ ಪುಂಡ ಪೋಕರಿಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯ ಮೊರೆ ಹೋಗಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಈ ಮೂಲಕ ಅವರಿಗೆ ಬಿಸಿ ಮುಟ್ಟಿಸಿದರೆ ಮಕ್ಕಳ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಯಲು ಸಹಕಾರಿ ಆಗುತ್ತದೆ.
ಬಡವರ ಮಕ್ಕಳೇ ಹೆಚ್ಚಾಗಿರುವ ಸರ್ಕಾರಿ ಶಾಲೆಗೆ ಬೇಕಿದೆ ಸೌಲಭ್ಯ.. ಹೆಚ್ಚಾಗಿ ಕೂಲಿ ಕಾರ್ಮಿಕರ ಮತ್ತು ಬಡವರ ಮಕ್ಕಳೇ ವ್ಯಾಸಂಗ ಮಾಡುತ್ತಿರುವ ಈ ಶಾಲೆಗೆ ಶಿಕ್ಷಣ ಇಲಾಖೆ, ಸ್ಥಳೀಯ ಆಡಳಿತ ಕೂಡಲೇ ಎಚ್ಚೆತ್ತು ಶೀಘ್ರವೇ ಮೂಲ ಸೌಕರ್ಯ ಕಲ್ಪಿಸುವ ಜೊತೆ ಶಾಲೆ ಆವರಣದಲ್ಲಿ ಸಿಸಿ ಕ್ಯಾಮರಾ ಅಳಡಿಸಬೇಕು ಎಂದು ಪಾಲಕರು ಒತ್ತಾಯಿಸುತ್ತಿದ್ದಾರೆ.
ಕಣ್ತೆರೆಯಲಿ ಶಿಕ್ಷಣ ಇಲಾಖೆ ಅಧಿಕಾರಿಗಳು.. ದುಸ್ಥಿತಿಯಲ್ಲಿರುವ ಜಿಲ್ಲಾ ಕೇಂದ್ರದ ಈ ಕಿರಿಯ ಪ್ರಾಥಮಿಕ ಶಾಲೆ ಬಗ್ಗೆ ನಗರದಲ್ಲೇ ಇರುವ ಇಲಾಖೆಯ ಅಧಿಕಾರಿಗಳು ಕಣ್ತೆರೆದು ನೋಡಿ ಇದರ ಅಭಿವೃದ್ಧಿಗೆ ಮುಂದಾಗಲಿ. ಈ ಮೂಲಕ ಸರ್ಕಾರಿ ಶಾಲೆಯ ಬಡ ಮಕ್ಕಳ ಶೈಕ್ಷಣಿಕ ಭವಿಷ್ಯ ಉಜ್ವಲಿಸುವಂತೆ ಮಾಡಲಿ ಎಂಬುದು ಈಟಿವಿ ಭಾರತ ಕಡೆಯಿಂದ ಕಳಕಳಿಯ ಮನವಿ..