ದಾವಣಗೆರೆ: ಸರ್ಕಾರ ಮನೆ ಇಲ್ಲದ ಬಡವರಿಗೆ ವಸತಿ ಯೋಜನೆಯಡಿ ಸೂರು ಕಲ್ಪಿಸುತ್ತೆ. ಆದ್ರೆ, ಇಲ್ಲಿರುವ ಕೆಲ ಸಚಿವರು, ಮುಖಂಡರುಗಳು ಆ ಮನೆಗಳನ್ನು ತಮ್ಮ ಪ್ರೇಯಸಿಯರಿಗೆ ಹಾಗೂ ಜನರಿಗೆ ಹಣಕ್ಕಾಗಿ ಮಾರಿಕೊಳ್ಳುತ್ತಾರೆ ಎಂಬ ಆರೋಪ ಕೇಳಿಬಂದಿದೆ.
ಹೌದು, ಆನಗೋಡು ಜಿ.ಪಂ. ಸದಸ್ಯರೋರ್ವರು ಸ್ಫೋಟಕ ಹೇಳಿಕೆ ನೀಡಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು ಸಹ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ನೆಚ್ಚಿನ ನಾಯಕ ಏಕೆ ಸೋತರು ಎಂಬುದನ್ನು ಆಪ್ತ ಬೆಂಬಲಿಗ ಸ್ವಾರಸ್ಯಕರವಾಗಿ ಹೇಳಿ ಸಭೆಯಲ್ಲಿ ಅಚ್ಚರಿಗೂ ಕಾರಣರಾಗಿದ್ದಾರೆ.
ದಾವಣಗೆರೆ ಉತ್ತರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ನ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಚುನಾವಣೆಯಲ್ಲಿ ಸೋತಿದ್ದು ತಮ್ಮ ಆಪ್ತ ಬೆಂಬಲಿಗರಿಂದ ಎಂದು ವೇದಿಕೆ ಮೇಲೆ ನೂರಾರೂ ಕಾರ್ಯಕರ್ತರ ಎದುರು ಜಿ. ಪಂ. ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಬಸವಂತಪ್ಪ ಸೋಲಿನ ಕಾರಣ ತಿಳಿಸಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದ ರೇಣುಕಾ ಮಂದಿರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಎಸ್.ಎಸ್ ಮಲ್ಲಿಕಾರ್ಜುನ್ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮ ವಹಿಸಿದ್ದಾರೆ. ಮಲ್ಲಣ್ಣ ಬಡ ಜನರಿಗೆ 10 ಸಾವಿರ ಮನೆಗಳನ್ನು ಮಂಜೂರು ಮಾಡಿ, ಪಕ್ಷದ ಮುಖಂಡರಿಗೆ ತಲಾ ನೂರು ಮನೆಗಳನ್ನು ಕೊಟ್ಟು ಬಡವರಿಗೆ ಹಂಚಿ ಎಂದಿದ್ದರಂತೆ. ಆದರೆ ಮುಖಂಡರು ಮಾತ್ರ ತನ್ನ ಹೆಂಡತಿ, ಮಕ್ಕಳು ಹಾಗೂ ತಮ್ಮೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡವರಿಗೆ ಮಾರಿಕೊಂಡಿದ್ದಾರೆಯೇ ಹೊರತು ಬಡವರಿಗೆ ನೀಡಿಲ್ಲವೆಂದು ದೂರಿದ್ದಾರೆ.
ಕೈ ಮುಖಂಡರ ಸ್ವಾದರ್ಥದಿಂದ ಮಲ್ಲಣ್ಣನ ಸೋಲು:
ಎಸ್.ಎಸ್ ಮಲ್ಲಿಕಾರ್ಜುನ್ ಅಭಿವೃದ್ಧಿ ಕೆಲಸ ಮಾಡಲು ಶ್ರಮಿಸುತ್ತಿದ್ದರೆ, ಇತ್ತ ಅವರ ಜೊತೆಗಿರುವ ಮುಖಂಡರು ಅವರ ಅಭಿವೃದ್ಧಿ ಕೆಲಸಗಳನ್ನು ಸ್ವಾರ್ಥಕ್ಕೆ ಬಳಸಿಕೊಂಡು ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸುವಂತಾಯಿತು ಎಂದು ಸ್ವಪಕ್ಷದ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ರು. ಜೈ ಮಲ್ಲಣ್ಣ, ಜೈ ಶಂಕ್ರಣ್ಣ ಎಂದರೆ ವೋಟು ಬರುವುದಿಲ್ಲ. ಮನೆಗಳಿಗೆ ತೆರಳಿ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿ ನೀಡಿ ಎಂದು ಬಸವಂತಪ್ಪ ಹೇಳಿದರು.
ಅಲ್ಲದೆ ಲೋಕಾಸಭೆ ಚುನಾವಣೆಯಲ್ಲಿ ಮಾಯಕೊಂಡ ಕ್ಷೇತ್ರದಲ್ಲಿ ಎಲ್ಲಾ ಪಕ್ಷಗಳಿಗಿಂತ ಹೆಚ್ಚಿನ ಮತಗಳು ಕಾಂಗ್ರೆಸ್ಗೆ ಬೀಳುವಂತೆ ಕೆಲಸ ಮಾಡುತ್ತೇನೆ ಎಂದರು. ನಗರದಲ್ಲಿರುವ ಮುಖಂಡರು ಈ ರೀತಿ ಚಾಲೆಂಜ್ ಮಾಡಿ ನೋಡೋಣ ಎಂದು ಬಸವಂತಪ್ಪ ಸವಾಲು ಹಾಕಿದ್ದಾರೆ.