ದಾವಣಗೆರೆ: "ಮುಂದಿನ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಏನಾದರೂ ಮಾಡಿ ಸೋಲಿಸಲೇಬೇಕು ಎನ್ನುವ ಉದ್ದೇಶದಿಂದ ನನಗೆ ಟಿಕೆಟ್ ತಪ್ಪಿಸಬೇಕು, ನನ್ನ ಕಾಲು ಕತ್ತರಿಸಬೇಕು, ವಿಷ ಹಾಕಿ ಸಾಯಿಸಬೇಕು ಎಂದು ಕೆಲವರು ಹೊಂಚು ಹಾಕುತ್ತಿದ್ದಾರೆ. ಆದ್ದರಿಂದ ನಾನು ಎಲ್ಲೇ ಹೋದರೂ ಎಚ್ಚರಿಕೆಯಿಂದ ಇರುತ್ತೇನೆ. ಯಾರು ಏನೇ ಕೊಟ್ಟರೂ ತಿನ್ನುವುದಿಲ್ಲ. ನನ್ನ ಸ್ನೇಹ ಬಳಗದಲ್ಲೇ ಈ ರೀತಿಯಲ್ಲಿ ಹೊಂಚು ಹಾಕುತ್ತಿದ್ದಾರೆ" ಎಂದು ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದರು.
ದಾವಣಗೆರೆಯಲ್ಲಿ ಭಾನುವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, "ನನಗೆ ಯಾವುದೇ ಜೀವ ಬೆದರಿಕೆ ಇಲ್ಲ. ನನ್ನ ಮೇಲಿನ ದ್ವೇಷದಿಂದ ಈ ರೀತಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ನನ್ನ ಮೇಲೆ ಇಡಿ, ಐಟಿ ದಾಳಿ ಆಗಬೇಕು ಎಂದು ಹೇಳುತ್ತಿದ್ದಾರೆ. ಈಗಾಗಲೇ ಎಲ್ಲವೂ ಆಗಿಹೋಗಿದೆ. ಯಾವುದೂ ಉಳಿದಿಲ್ಲ. ನಾನು ನಿರಪರಾಧಿ. ನಾನು ಸಂಸದ. ಇವುಗಳಿಗೆಲ್ಲ ಜಗ್ಗಲ್ಲ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡೇ ಮಾಡುತ್ತೇನೆ" ಎಂದು ಸವಾಲು ಹಾಕಿದರು.
ಹವಾಲ ಆರೋಪ: "ಉಮೇಶ್ ಹಾಗು ಮಲ್ಲಿಕಾರ್ಜುನ್ ಎಂಬವರು ಅಡಿಕೆ ಸಿಗುತ್ತಿಲ್ಲ ಎಂದು ಹೇಳಿ ಬೆಂಗಳೂರಿಗೆ ತೆರಳಿದಾಗ ಕಾರಿನಲ್ಲಿದ್ದ ಒಂದು ಕೋಟಿ ರೂಪಾಯಿ ಹಣವನ್ನು ಯಾರೋ ಲಪಟಾಯಿಸಿದ್ದಾರೆ. ಇದರ ಸಂಬಂಧ ಪ್ರಕರಣ ಕೂಡ ದಾಖಲಾಗಿದೆ. ಕಳ್ಳನನ್ನು ಪೊಲೀಸರು ಬಂಧಿಸಿ ಹಣ ಕೂಡ ವಸೂಲಿ ಮಾಡಿದ್ದಾರೆ. ನಾನು ಹಾಗೂ ತಮ್ಮ ಸೇರಿ ಹವಾಲ ಮಾಡುತ್ತಿದ್ದೇವೆ ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿವೆ. ಆದರೆ ಬೆಂಗಳೂರಿನಲ್ಲಿ ಸಿಕ್ಕ ಒಂದು ಕೋಟಿ ರೂಪಾಯಿ ಹಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಕೆಲವರು ಹೀಗೆ ಮಾಡಿದ್ದಾರೆ. ನನ್ನನ್ನು ಸೋಲಿಸಲು ಷಡ್ಯಂತ್ರ ಮಾಡುತ್ತಿದ್ದಾರೆ. ಇದೆಲ್ಲ ಸುಳ್ಳು, ಸತ್ಯಕ್ಕೆ ದೂರವಾದದ್ದು" ಎಂದು ಸ್ಪಷ್ಟನೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, "ಮುಖ್ಯಮಂತ್ರಿ ಸಿದ್ದರಾಮಯ್ಯ ಜ.22ರ ನಂತರ ರಾಮ ಮಂದಿರಕ್ಕೆ ಹೋಗುತ್ತೇನೆ ಎಂದು ಹೇಳಿದ್ದಾರೆ. ಅವರನ್ನು ನಾನು ಅಭಿನಂದಿಸುತ್ತೇನೆ. ರಾಮ ಎಂದರೆ ಪರಿವರ್ತನೆ, ರಾಮ ಎಂದರೆ ಸುಧಾರಣೆ. ಆದ್ದರಿಂದ ಸಿಎಂ ಪರಿವರ್ತನೆಯಾಗಿದ್ದಾರೆ, ರಾಮಮಂದಿರಕ್ಕೆ ಹೋಗುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ" ಎಂದು ಟಾಂಗ್ ನೀಡಿದರು.
"ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೂಡ ಕಾಂಗ್ರೆಸ್ ತನ್ನ ನೀತಿ ಬದಲಿಸಿದರೆ ನಾವು ರಾಮಮಂದಿರಕ್ಕೆ ಹೋಗುತ್ತೇವೆ ಎಂದು ಹೇಳಿದ್ದಾರೆ. ಕೆಲವರು ಮಾತ್ರ ಹೋಗಲ್ಲ ಎಂದಿದ್ದಾರೆ. ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು. ಎಲ್ಲಾ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲು ಅವಕಾಶ, ಸಹಕಾರ ಮಾಡಿಕೊಡಬೇಕಿದೆ" ಎಂದು ಹೇಳಿದರು.
"ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಸುವರ್ಣ ಸೌಧದ ಕೂಗಳತೆ ದೂರದಲ್ಲೇ ಒಬ್ಬ ಮಹಿಳೆಯನ್ನು ಬೆತ್ತಲೆ ಮಾಡಿ ಹಲ್ಲೆ ನಡೆಸಿದರೂ ಕ್ರಮ ಕೈಕೊಂಡಿಲ್ಲ. ಸಿಎಂ ಇದಕ್ಕೆ ಬೆಲೆ ತೆರಬೇಕಿದೆ. ಮಹಿಳೆಯರಿಗೆ ರಕ್ಷಣೆ ಇಲ್ಲದಿರುವ ಭಾಗ್ಯವನ್ನು ಈ ಸರ್ಕಾರ ನೀಡಿದೆ. ಖಾತೆಗೆ 2 ಸಾವಿರ ರೂ ಹಾಕುತ್ತೇವೆ ಎಂದು ಹೇಳಿ ಅವರಿಗೂ ಮೋಸ ಮಾಡುತ್ತಿದ್ದಾರೆ. ಕಾಂಗ್ರೆಸ್ನವರು ಯಾವುದೇ ಜೋಡೋ ಯಾತ್ರೆ ಮಾಡಿದರೂ ರಾಮನಿಗಿಂತ ಜೋಡೋ ಇದೆಯಾ? ರಾಮನಿಗಿಂತ ದೊಡ್ಡ ಜೋಡೋ ಕಾರ್ಯಕ್ರಮವನ್ನು ರಾಹುಲ್ ಮಾಡ್ತಾರಾ?, ರಾಮ ಮಂದಿರಕ್ಕೆ ಪರ್ಯಾಯ ರೀತಿಯಾಗಿ ನ್ಯಾಯ ಜೋಡೋ ಯಾತ್ರೆ ಮಾಡ್ತಾ ಇದ್ದಾರೆ. ರಾಮನ ವಿರುದ್ಧ ಯಾರಿದ್ದಾರೋ ಅವರು ಕಷ್ಟ ಅನುಭವಿಸುತ್ತಾರೆ" ಎಂದರು.
ಇದನ್ನೂ ಓದಿ: 40 ವರ್ಷಗಳಿಂದ ನಾನು ರಾಜಕಾರಣ ಮಾಡುತ್ತಿದ್ದೇನೆ, ಬ್ಲ್ಯಾಕ್ಮೇಲ್ಗೆ ಹೆದರಲ್ಲ: ರೇವಣ್ಣ