ದಾವಣಗೆರೆ: ರಾಜ್ಯದಲ್ಲಿ ಚುನಾವಣೆ ಪರ್ವ ಶುರುವಾಗಿದೆ. ರಾಜಕಾರಣಿಗಳು ಗೆಲುವು ಸಾಧಿಸಲು ಪೂಜೆ ಪುನಸ್ಕಾರ, ಹೋಮ ಹವನ ಮಾಡುವುದನ್ನು ನೋಡಿದ್ದೇವೆ. ಆದ್ರೆ ಬೆಣ್ಣೆ ನಗರಿಯಲ್ಲಿ ಮಾಜಿ ಸಚಿವ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಚುನಾವಣೆ ಬೆನ್ನಲ್ಲೇ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ವೀರಭದ್ರೇಶ್ವರ ಸನ್ನಿಧಿಯಲ್ಲಿ ಬೆಂಕಿ ಕೆಂಡ ತುಳಿದು ತಮ್ಮ ಮತದಾರರ ಗಮನ ಸೆಳೆದರು. ಇದಲ್ಲದೆ ಪತ್ನಿ ಪುತ್ರನ ಜೊತೆಗೆ ವೀರಭದ್ರೇಶ್ವರ ದೇವರ ಸನ್ನಿಧಿಗೆ ಬಂದು ಪುತ್ರನ ಜೊತೆಗೆ ಕೆಂಡ ಹಾಯ್ದು ಹರಕೆ ತೀರಿಸಿದರು.
ದಾವಣಗೆರೆಯ ಹಳೆಪೇಟೆಯಲ್ಲಿ ಬರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿಂದು ಪ್ರತಿ ವರ್ಷದಂತೆ ಕೆಂಡೋತ್ಸವ ಜರುಗಿತು. ಯಾರಾದರು ತಮ್ಮ ಇಷ್ಟಾರ್ಥಗಳು ಪೂರೈಕೆ ಆಗಬೇಕು ಅಂದ್ರೆ ಈ ದೇವಸ್ಥಾನದಲ್ಲಿ ಹರಕೆ ಕಟ್ಟಿಕೊಂಡು ಕೆಂಡ ತುಳಿದರೆ ಸಾಕು ಅವರ ಇಷ್ಟಾರ್ಥಗಳು ಪೂರ್ಣಗೊಳ್ಳುತ್ತವೆ. ಮೇಲಾಗಿ ಇದು ಚುನಾವಣೆಯ ಸಮಯವಾಗಿದ್ದರಿಂದ ಎಲ್ಲದಕ್ಕಿಂತ ಹೆಚ್ಚು ಇಷ್ಟಾರ್ಥಗಳು ರಾಜಕಾರಣಿಗಳದ್ದೇ ಇರುತ್ತವೆ.
ಇಷ್ಟಾರ್ಥ ಸಿದ್ಧಿಗಾಗಿ ಕೆಂಡ ತುಳಿದ ಮಾಜಿ ಸಚಿವ : ಸಾವಿರ ಭಕ್ತರಿಗಿಂತ ಈ ರಾಜಕಾರಣಿಗಳ ಬೇಡಿಕೆಗಳು ಮಹತ್ವ ಪಡೆದುಕೊಳ್ಳುತ್ತವೆ. ಇದೇ ರೀತಿ ಇಂದು ಬೆಳಗ್ಗೆಯೇ ಪತ್ನಿ ಪ್ರಭಾ ಮಲ್ಲಿಕಾರ್ಜುನ, ಮಕ್ಕಳ ಸಮೇತ ಬಂದ ಮಾಜಿ ಸಚಿವ ಹಾಗೂ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್ ಎಸ್ ಮಲ್ಲಿಕಾರ್ಜುನ ಅವರು ವೀರಭದ್ರೇಶ್ವರ ಸನ್ನಿಧಿಯಲ್ಲಿ ಇಂದು ಬೆಳಗ್ಗೆಯೇ ಪ್ರತ್ಯಕ್ಷರಾಗಿದ್ದರು. ಪುತ್ರ ಸಮರ್ಥ ಶಾಮನೂರು ಜೊತೆಗೆ ಕೆಂಡ ತುಳಿದರು. ಇಲ್ಲಿ ಕೆಂಡ ತುಳಿದರೆ ಸಾಕು ಒಳ್ಳೆಯದಾಗುತ್ತದೆ. ಕೆಂಡ ತುಳಿಯುವ ಮೊದಲು ವೀರಭದ್ರೇಶ್ವರನಿಗೆ ಸುಮಾರು ಅರ್ಧ ಗಂಟೆ ಕಾಲ ಪೂಜೆ ಸಲ್ಲಿಸಿದರು. ಜೊತೆಗೆ ಕೊರಳಲ್ಲಿನ ವಜ್ರದ ಹರಳು ಇರುವ ಚಿನ್ನದ ಚೈನ್ ಹಾಗೂ ಉಂಗುರಕ್ಕೂ ಪೂಜೆ ಮಾಡಿಸಿದ್ದು ವಿಶೇಷವಾಗಿತ್ತು.
ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಆಶೀರ್ವಾದ ಮಾಡಲಿ: ಮೊನ್ನೆ ತಾನೆ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿರುವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಹಳ್ಳಿ ಭಾಗದಲ್ಲಿ ಚುನಾವಣೆ ಆರಂಭಿಸಬೇಕು. ಇದಕ್ಕೆ ಪೂರಕವಾಗಿ ವೀರಭದ್ರೇಶ್ವರನ ಕೆಂಡದ ಹರಕೆ ತೀರಿಸಿ ಪ್ರಚಾರಕ್ಕೆ ಧುಮುಕುವ ಪ್ಲಾನ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಎಸ್ ಎಸ್ ಮಲ್ಲಿಕಾರ್ಜುನ್ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಕೆಂಡ ತುಳಿದಿದ್ದೇನೆ. ದೇವರ ಆಶೀರ್ವಾ ನಮ್ಮ ಮೇಲೆ ಹಾಗೂ ನಿಮ್ಮ ಮೇಲೆ ಇರಲಿ. ಒಳ್ಳೆ ಮಳೆ ಬೆಳೆ ಕೊಡಲಿ, ಹಾಗೆಯೇ ರಾಜಕೀಯವಾಗಿ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಆಶೀರ್ವಾ ಮಾಡಲಿ ಎಂದು ಹಾರೈಸುತ್ತೇನೆ ಎಂದರು.
ಸಿಎಂ ಆಯ್ಕೆ ಹೈಕಮಾಂಡ್ಗೆ ಬಿಟ್ಟ ವಿಚಾರ: ಕಾಂಗ್ರೆಸ್ನಲ್ಲಿ ಸಿಎಂ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಹೇಳುತ್ತಾರೋ ಅವರು ಸಿಎಂ ಆಗುತ್ತಾರೆ. ಕಾಂಗ್ರೆಸ್ನಲ್ಲಿ ಲಿಂಗಾಯತರು ಸಿಎಂ ಆಗುತ್ತಾರೆಯೇ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಹೈಕಮಾಂಡ್ಗೆ ಬಿಟ್ಟ ವಿಚಾರ. ಅವರು ಯಾರ ಕೈ ಹಿಡಿಯುತ್ತಾರೋ ಅವರನ್ನು ಸಿಎಂ ಆಗಿ ಆಯ್ಕೆ ಮಾಡಲಾಗುತ್ತದೆ ಎಂದರು. ಹಿಂದಿನಿಂದಲೂ ಇದು ನಮ್ಮ ಕಾಂಗ್ರೆಸ್ ಸಂಪ್ರದಾಯ. ಮುಂಚೆ ಸಿದ್ಧರಾಮಯ್ಯನವರು ಆಯ್ಕೆಯಾಗಿದ್ದರು. ಒಳ್ಳೆ ಆಡಳಿತವನ್ನು ಕೊಟ್ಟಿದ್ದಾರೆ. ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತವನ್ನು ಕೊಟ್ಟಿದ್ದಾರೆ. ಬಡವರಿಗೆ ಸಾಕಷ್ಟು ಯೋಜನೆಗಳನ್ನು ತಂದಿದ್ದಾರೆ. ಆ ತರದವರು ಸದ್ಯಕ್ಕೆ ಬೇಕು ಎಂದು ಮಲ್ಲಿಕಾರ್ಜುನ ಹೇಳಿದರು.
ಇದನ್ನೂ ಓದಿ : ಬಿಜೆಪಿ ಟಿಕೆಟ್ ಸಿಗದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಮಾಡಾಳ್ ಪುತ್ರ ಮಲ್ಲಿಕಾರ್ಜುನ ಕಣಕ್ಕೆ?