ದಾವಣಗೆರೆ: ಆತ ಕನ್ನಡಪರ ಸಂಘಟನೆಯೊಂದರ ತಾಲೂಕು ಅಧ್ಯಕ್ಷ. ಇದರೊಂದಿಗೆ ತನ್ನ ಸಹೋದರಿ ಜೊತೆ NGO ಒಂದನ್ನಾ ನಡೆಸ್ತಾ ಇದ್ದ. ತಾಲೂಕಿನಲ್ಲಿ ಯಾವುದೇ ಅಧಿಕಾರಿ ಭ್ರಷ್ಟಾಚಾರ ಮಾಡಿದ್ರೆ ಸಾಕು ಅವರ ವಿರುದ್ಧ ಹೋರಾಟಕ್ಕೆ ಇಳಿತಿದ್ದ. ಅವರ ಅಕ್ರಮಗಳನ್ನ ಬಯಲಿಗೆ ಎಳೆಯೋದರಲ್ಲಿ ನಿಸ್ಸೀಮನಾಗಿದ್ದ. ಅವನ ಹೋರಾಟನೇ ಅವನ ಜೀವಕ್ಕೆ ಮುಳುವಾಗಿದ್ದು, ನಾಮಕೇವಾಸ್ತೆಗೆ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಆದರೆ ಹೋರಾಟ ನಡೆಸಿದ ಬಳಿಕ 11 ಜನರ ವಿರುದ್ಧ ಎಫ್ಐಆರ್ ಆಗಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹೊಸಕೆರೆ ಬಳಿಯ ಡಾಬಾ ಒಂದರಲ್ಲಿ ಶನಿವಾರ ಸಂಜೆ ನಡೆದಿದ್ದ ಭೀಕರ ಹತ್ಯೆಯ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹತ್ಯೆಯಾದ ಯುವಕ ರಾಮಕೃಷ್ಣ ಇವನು ಜಗಳೂರು ತಾಲೂಕಿನ ಗೌರಿಪುರ ಗ್ರಾಮದವನು ಎಂಬುದು ತಿಳಿದು ಬಂದಿದೆ. ನಿನ್ನೆ ರಾತ್ರಿ ಡಾಬಾದಲ್ಲಿ ಊಟಕ್ಕೆ ಹೋದಾಗ ರಾಮಕೃಷ್ಣನನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದರು. ರಾಮಕೃಷ್ಣ ಅವರ ಕುಟುಂಬಸ್ಥರು ನಡೆಸಿದ ಹೋರಾಟಕ್ಕೆ ಮಣಿದ ಪೊಲೀಸರು ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಮಹಿಳೆಯರು ಸೇರಿದಂತೆ 11 ಜನರ ಮೇಲೆ ಎಫ್ಐಆರ್ ದಾಖಲು ಮಾಡಿದ್ದಾರೆ.
ಕೊಲೆ ಪ್ರಕರಣದಲ್ಲಿ ಗುತ್ತಿದುರ್ಗದ ಹಾಲಿ ಪಿಡಿಓ ಎ ಟಿ ನಾಗರಾಜ್ A1 ಆರೋಪಿಯಾಗಿದ್ದು, ಪಿಡಿಒ ಸಹೋದರ ಪ್ರಭು, ಅರ್ಜುನ್ ಅಲಿಯಾಸ್ ಪ್ರಶಾಂತ್, ಕುಮಾರ್, ಧನ್ಯಕುಮಾರ್, ಬಸವನಗೌಡ ಜಿ ಸಿ, ಯೋಗೇಶ್, ನಾಗರಾಜ್ ಆಚಾರ್ಯ, ಲಲಿತಮ್ಮ, ರೇಣುಕಮ್ಮ, ಪ್ರಮೀಳಮ್ಮ, ಮೇಲೆ ಎಫ್ಐಆರ್ ದಾಖಲಾಗಿದೆ. ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್ಪಿ ಸಿ ಬಿ ರಿಷ್ಯಂತ್ ಅವರು ರಾಮಕೃಷ್ಣನ ಕೊಲೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆಸಲಾಗಿದೆ. ಯಾರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಅವರ ವಿರುದ್ದ ಕೂಡ ತನಿಖೆಯಲ್ಲಿ ಸಾಬೀತಾದರೆ ಕ್ರಮ ಜರುಗಿಸುತ್ತೇವೆ ಎಂದು ಇದೇ ವೇಳೆ ಎಸ್ಪಿ ಸ್ಪಷ್ಟಪಡಿಸಿದ್ದಾರೆ.
ಕೊಲೆಗೆ ಸಂಬಂಧಿಸಿದಂತೆ 24 ವರ್ಷದ ಅರ್ಜುನ್ ಮತ್ತು ಪ್ರಶಾಂತ ಅನ್ನೋರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಕುಟುಂಬದ ಸದಸ್ಯರು ಮಾತ್ರ ಇದರ ಹಿಂದೆ ಬೇರೆ ವ್ಯಕ್ತಿಗಳ ಕೈವಾಡವಿದೆ. ಅವರ ಬಂಧನ ಆಗುವವರೆಗೂ ನಾವು ಶವ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಅಂತ ಹಠ ಹಿಡಿದು ಧರಣಿ ನಡೆಸಿದ್ದರು. ಅಷ್ಟಕ್ಕೂ ಆ ಬೇರೆ ವ್ಯಕ್ತಿ ಯಾರು ಎಂಬುದನ್ನು ಕೆದಕಿದಾಗ ಸಿಕ್ಕಿದ್ದು ಮಾತ್ರ ಅದೆ ಗೌರಿಪುರ ಗ್ರಾಮ ಪಂಚಾಯತ್ ಪಿಡಿಒ ಎಂ.ಟಿ ನಾಗರಾಜ್ ವಿರುದ್ಧ ಮೃತ ರಾಮಕೃಷ್ಣ ಉದ್ಯೋಗ ಖಾತ್ರಿಯಲ್ಲಿ ಕೋಟಿ ಕೋಟಿ ಲೂಟಿ ಮಾಡಿ ನಾಲ್ಕು ಭಾರಿ ಅಮಾನತು ಆಗುವಂತೆ ಮಾಡಿದ್ದ.
ಪಿಡಿಒ ಭ್ರಷ್ಟಾಚಾರವನ್ನ ಬಯಲಿಗೆಳೆದ ಎಂಬ ಒಂದೇ ಕಾರಣಕ್ಕೆ ಪಿಡಿಒ ನಾಗರಾಜ್ ಅವರ ಸಹೋದರ ಪ್ರಭು ನಿನ್ನನ್ನು ಹಾಗೂ ನಿಮ್ಮ ತಮ್ಮನನ್ನು ಕೊಲೆ ಮಾಡ್ತಿವಿ ಎಂದು ಧಮ್ಕಿ ಹಾಕಿದ್ದನಂತೆ. ಹೇಳಿದಂತೆ ನಮ್ಮಣ್ಣನನ್ನು ಪಿಡಿಒ ಎ ಟಿ ನಾಗರಾಜ್ ಆತನ ಸಹೋದರ ಕೊಲೆ ಮಾಡಿದ್ದಾರೆ ಎಂದು ಸಹೋದರಿ ರೇಣುಕಾ ಆರೋಪ ಮಾಡಿದ್ರು.
ನಾಲ್ಕು ಭಾರಿ ಅಮಾನತು ಆಗಿದ್ರು ಪಿಡಿಒ: ಉದ್ಯೋಗ ಖಾತ್ರಿಯಲ್ಲಿ ಭ್ರಷ್ಟಾಚಾರ ನಡೆಸಿದ ಬೆನ್ನಲ್ಲೇ ರಾಮಕೃಷ್ಣ ಹೋರಾಟ ಮಾಡಿ ನಾಲ್ಕು ಭಾರಿ ಅಮಾನತು ಆಗಿದ್ದರು. ಮತ್ತೆ ಸ್ಥಳಕ್ಕೆ ಪಿಡಿಒ ನಿಯೋಜನೆಗೊಂಡಿದ್ದು, ಜಗಳೂರು ಶಾಸಕ ಎಸ್ ಎ ವಿ ರಾಮಚಂದ್ರ ಸಹ ಪಿಡಿಒ ಪರವಾಗಿ ಇದ್ದರು ಎಂದು ಮೃತನ ಸಹೋದರಿ ರೇಣುಕಾ ಆರೋಪ ಮಾಡಿದ್ದಾಳೆ. ಪಿಡಿಒ ನಾಗರಾಜ್ ಅಮಾನತು ಮಾಡುವಂತೆ ರೇಣುಕಾ, ಶಾಸಕ ಎಸ್ ವಿ ರಾಮಚಂದ್ರಗೆ ವೇದಿಕೆ ಮೇಲೆ ಕ್ಲಾಸ್ ತೆಗೆದುಕೊಂಡಿದ್ದಳಂತೆ. ಈ ಹಿನ್ನೆಲೆಯಲ್ಲಿ ಕೊಲೆಯ ಹಿಂದೆ ಶಾಸಕ ರಾಮಚಂದ್ರಪ್ಪ ಅವರ ಕೈವಾಡ ಇದೆ ಎಂದು ರಾಮಕೃಷ್ಣನ ಸಹೋದರಿ ರೇಣುಕಾ ಆರೋಪಿಸಿದ್ದಾರೆ.
ಒಟ್ಟಾರೆ ಇಡೀ ದಾವಣಗೆರೆ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿರುವ ರಾಮಕೃಷ್ಣ ಕೊಲೆ ಕೇಸ್ ದಾಖಲಿಸಿಕೊಂಡ ಪೊಲೀಸರು ಸದ್ಯ ತಲೆಮರೆಸಿಕೊಂಡ ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಇತ್ತ ರಾಮಕೃಷ್ಣನನ್ನು ಕಳೆದುಕೊಂಡ ಆತನ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಅದೇನೆ ಆಗಲಿ ಅನ್ಯಾಯದ ವಿರುದ್ಧ ಹೋರಾಟ ಮಾಡಿದ ರಾಮಕೃಷ್ಣನ ಕೊಲೆಯಾಗಿದೆ. ಈ ಕೊಲೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಅಸಲಿ ಕೊಲೆಗಾರರನ್ನು ಬಂಧಿಸಬೇಕೆಂದು 11 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಕೊಲೆಯ ಹಿಂದಿನ ಕಹಾನಿ ಮಾತ್ರ ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.