ದಾವಣಗೆರೆ: ನಗರದ ಹೊರವಲಯದ ಕಲಪನಹಳ್ಳಿಯ ಕೂಗಳತೆ ದೂರದಲ್ಲಿರುವ ಚೌಡೇಶ್ವರಿ ದೇವಸ್ಥಾನದ ಜಮೀನಿಗಾಗಿ ಜಗಳ ಉಂಟಾಗಿದ್ದು ಪ್ರಕರಣ ಇತ್ಯರ್ಥ ಪಡಿಸಲು ತಹಶೀಲ್ದಾರ್ ಮಧ್ಯಪ್ರವೇಶಿಸಿದ್ದಾರೆ.
ಜಮೀನಿನ ಮಾಲೀಕ ಚಂದ್ರಪ್ಪ ಇಲ್ಲಿ ಕೃಷಿ ಆರಂಭಿಸುವ ಮೊದಲೇ ಚೌಡಮ್ಮನ ಕಟ್ಟೆ ಇತ್ತಂತೆ. ಅವರು ಅದಕ್ಕೊಂದು ಚೌಕಟ್ಟು ನಿರ್ಮಿಸಿ, ಪೂಜೆ-ಪುನಸ್ಕಾರ ನೆರವೇರಿಸುತ್ತಿದ್ದರಂತೆ. 25 ವರ್ಷಗಳ ಹಿಂದೆ ರಂಗನಾಥ ಎಂಬುವರು ದೇವಸ್ಥಾನ ನಿರ್ವಹಣೆ ಮಾಡಲು ಮುಂದೆ ಬಂದಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ದೇವಸ್ಥಾನ ನಿರ್ವಹಿಸಲು ಜಮೀನಿನ ಮಾಲೀಕ ಚಂದ್ರಪ್ಪ ಅನುಮತಿ ನೀಡಿದ್ದರು ಎನ್ನಲಾಗ್ತಿದೆ.
ಅದ್ರೆ ಇದೀಗ ಪರಿಸ್ಥಿತಿ ಬದಲಾಗಿದ್ದು, ಚಂದ್ರಪ್ಪನವರು ಅನಿವಾರ್ಯವಾಗಿ ತಮ್ಮ ಜಮೀನನ್ನು ಮಾರಾಟ ಮಾಡಿದ್ದರಿಂದ ಸಮಸ್ಯೆ ಉಂಟಾಗಿದೆ. ಚಂದ್ರಪ್ಪ ಅವರಿಂದ ಅಮಾನುಲ್ಲಾ ಖಾನ್ ಎಂಬ ವ್ಯಕ್ತಿ ಜಮೀನು ಖರೀದಿ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ನೆಪದಲ್ಲಿ ರಂಗನಾಥ ಎಂಬುವರು ಹೆಚ್ಚುವರಿ ಜಾಗ ಕಬಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಚಂದ್ರಪ್ಪ ಆರೋಪಿಸಿದ್ದು, ಈ ಕಾರಣಕ್ಕೆ ಪ್ರವೇಶ ನಿರ್ಬಂಧಿಸಿ ದೇವಸ್ಥಾನಕ್ಕೆ ಬೀಗ ಹಾಕಿದ್ದಾರೆ.
ವಿಚಾರ ತಿಳಿದ ದಾವಣಗೆರೆ ತಹಶೀಲ್ದಾರ್ ಗಿರೀಶ್, ತಮ್ಮ ತಂಡದೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಚಂದ್ರಪ್ಪ ಹಾಗೂ ರಂಗನಾಥ ಇಬ್ಬರನ್ನೂ ಸಮಾಧಾನ ಪಡಿಸಿ, ದೇವಸ್ಥಾನ ಜಾಗವನ್ನು ಅಳತೆ ಮಾಡಿಸಿದ್ದಾರೆ. ಜಮೀನಿನ ದಾಖಲೆಗಳನ್ನು ಪರಿಶೀಲನೆ ಮಾಡಿ ನಂತರ, ಸರ್ವೇ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದ್ದಾರೆ.