ದಾವಣಗೆರೆ: ಇಷ್ಟು ದಿನ ಕೋಳಿ ಜಗಳ ಫೆಮಸ್ಸಾಗಿತ್ತು. ಸಣ್ಣ ವಿಚಾರಗಳಿಗೆ ದೊಡ್ಡ ದೊಡ್ಡ ಗಲಾಟೆಗಳು ಸಹ ನಡೆಯುತ್ತಿದ್ದವು. ಆದರೆ, ನಾಯಿ ವಿಚಾರವಾಗಿ ಮಾರಾಮಾರಿ ನಡೆದಿದೆ. ದಾವಣಗೆರೆಯ ಜಗಳೂರಿನಲ್ಲಿ ನಾಯಿ ವಿಚಾರವಾಗಿ ಜಗಳ ನಡೆದಿದ್ದು, ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
ಘಟನೆಗೆ ಕಾರಣ:
ಜಗಳೂರುನಿಂದ ಖಾನಾಹೊಸಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಕ್ರಕ್ಕೆ ಸಿಲುಕಿ ನಾಯಿಯೊಂದು ಸಾವನ್ನಪ್ಪಿತ್ತು. ಇದರಿಂದ ಆಕ್ರೋಶಗೊಂಡ ನಾಯಿ ಮಾಲೀಕ ಸಿದ್ದೇಶ್ ಎಂಬುವರು, ಬಸ್ ಚಾಲಕ ವೀರಣ್ಣನೊಂದಿಗೆ ಜಗಳ ತೆಗೆದಿದ್ದರು. ಈ ವೇಳೆ ಚಾಲಕ ವೀರಣ್ಣನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಸಿದ್ದೇಶ ಹಾಗೂ ಈತನ ಸ್ನೇಹಿತ ಅಜ್ಜಪ್ಪ ಹಲ್ಲೆ ಸಹ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಬಸ್ ನಿರ್ವಾಹಕ ತಿಪ್ಪೇಸ್ವಾಮಿ ಘಟನೆಯನ್ನು ಚಿತ್ರೀಕರಣ ಮಾಡುತ್ತಿದ್ದ. ಇದನ್ನು ಗಮಿಸಿದ ಸಿದ್ದೇಶ ಮೊಬೈಲ್ ಕಸಿದುಕೊಂಡು ಆತನಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗುತ್ತಿದೆ.
ಮಾರಾಮಾರಿಯಲ್ಲಿ ಚಾಲಕ ವೀರಣ್ಣ ಗಂಭೀರವಾಗಿ ಗಾಯಗೊಂಡಿದ್ದು, ಇದೀಗ ಜಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕರ್ತವ್ಯಕ್ಕೆ ಅಡ್ಡಿ, ಅವಾಚ್ಯ ಶಬ್ದಗಳಿಂದ ನಿಂದನೆ ಸೇರಿದಂತೆ ಸಿದ್ದೇಶ ಹಾಗೂ ಅಜ್ಜಪ್ಪನ ವಿರುದ್ಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.