ಹರಿಹರ(ದಾವಣಗೆರೆ): ತಾಲೂಕು ಆಡಳಿತ ಮಧ್ಯವರ್ತಿಗಳು ಖರೀದಿಸುವ ಸಮಯ ಹೊರತುಪಡಿಸಿ ಭತ್ತ ಕಟಾವಿಗೆ ಬಂದ ವೇಳೆ ಖರೀದಿ ಕೇಂದ್ರವನ್ನು ತೆರೆಯಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಪಾಟೀಲ್ ಆಗ್ರಹಿಸಿದರು.
ಹೊಬಳಿಗೊಂದು ಭತ್ತ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಸಮಿತಿಯ ಪದಾಧಿಕಾರಿಗಳ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಬಳಿಕ ಮಾತಾನಾಡಿದ ಅವರು, ಭತ್ತ ಕಟಾವಿಗೆ ಬಂದ ವೇಳೆ ಖರೀದಿ ಕೇಂದ್ರ ತೆರೆಯಬೇಕು. ರೈತರು ತಮ್ಮ ಫಸಲು ಖಾಸಗಿಯವರಿಗೆ ಮಾರಾಟ ಮಾಡಿದ ಮೇಲೆ ಸರ್ಕಾರ ಖರೀದಿ ಕೇಂದ್ರಗಳ ಸೇವೆ ನೀಡುತ್ತಿರುವುದು ನೋವಿನ ಸಂಗತಿ ಎಂದರು.
ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಖರೀದಿ ಕೇಂದ್ರ ತೆರೆಯುವುದರಿಂದ ರೈತರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ರೈತರು ತಾವು ಬೆಳೆದ ಬೆಳೆಯನ್ನು ಎಪಿಎಂಸಿಯ ಖರೀದಿ ಕೇಂದ್ರಕ್ಕೆ ಸಾಗಾಣಿಕೆ ಮಾಡಲು ಹೊರೆಯಾಗುತ್ತಿದೆ. ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಹೊಬಳಿಗೊಂದು ಭತ್ತ ಖರೀದಿ ಕೇಂದ್ರ ತೆರೆಯಬೇಕು ಎಂದು ಹೇಳಿದರು.
ಸರ್ಕಾರ ಕ್ವಿಂಟಾಲ್ ಭತ್ತಕ್ಕೆ ಕನಿಷ್ಠ 2,500 ರೂ. ಬೆಂಬಲ ಬೆಲೆ ಘೋಷಿಸಿ, ಆನ್‌ಲೈನ್ ನೋಂದಣಿ ಜೊತೆಗೆ ಒಬ್ಬ ರೈತನಿಂದ ಕೇವಲ 40 ಕ್ವಿಂಟಲ್ ಭತ್ತ ಖರೀದಿಗೆ ಮಿತಿಗೊಳಿಸಿರುವುದು ಸರಿಯಲ್ಲ. ರೈತನು ಬೆಳೆದ ಸಂಪೂರ್ಣ ಬೆಳೆಯನ್ನು ಪಹಣಿ ಆದಾರದ ಮೇಲೆ ಖರೀದಿಸಬೇಕು ಎಂದರು.
ರೈತ ಮುಖಂಡ ಓಂಕಾರಪ್ಪ ಮಾತನಾಡಿ, ರೈತರು ಬೇಸಿಗೆ ಬೆಳೆಯನ್ನು ಕಟಾವುಮಾಡಿ ಮಾರುಕಟ್ಟೆಗೆ ತರುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದ್ದು ರೈತರಿಗೆ ಇದರಿಂದ ದಿಕ್ಕು ತೋಚದಂತಾಗಿದೆ. ಈ ಹಿಂದಿನ ಹಂಗಾಮಿನಲ್ಲಿ ಕ್ವಿಂಟಾಲ್ಗೆ 2,000 ದಿಂದ 2,200 ರೂ.ವರೆಗೂ ಎ ದರ್ಜೆಯ ಭತ್ತವನ್ನು ಖರೀದಿ ಮಾಡುತ್ತಿದ್ದರು. ಆದರೆ, ಈ ಹಂಗಾಮಿನಲ್ಲಿ 1,400 ರಿಂದ 1,500 ರೂ.ಗೆ ಕುಸಿದಿದೆ. ಹೆಚ್ಚಿನ ಬೆಲೆ ನೀಡಬೇಕು ಎಂದು ಮನವಿ ಮಾಡಿದರು.
ರೈತ ಮುಖಂಡ ಪ್ರಭುಗೌಡ, ಶಂಭುಲಿಂಗಪ್ಪ, ಧರ್ಮರಾಜ್, ಶಿವಶಂಕರಪ್ಪ, ಶಿವಯ್ಯ, ಉಮ್ಮಣ್ಣ, ಚಂದ್ರಶೇಖರಯ್ಯ, ಲೋಕೇಶ್, ಬಸವರಾಜ್, ನಂದೀಶ್, ಮಹೇಶ್ವರಪ್ಪ ದೊಗ್ಗಳ್ಳಿ, ಜಗದೀಶ್ ಜಿಗಳಿ ಸೇರಿದಂತೆ ಇತರರು ಇದ್ದರು.