ದಾವಣಗೆರೆ: ಜಮೀನಿಗೆ ನೀರು ಹಾಯಿಸಲು ಪಂಪ್ಸೆಟ್ಗೆ ಅಳವಡಿಸಿದ್ದ ಕೇಬಲ್ ಕಳ್ಳತನ ಮಾಡುತ್ತಿದ್ದ ಖದೀಮನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಸುಲ್ತಾನಿಪುರ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಸುಲ್ತಾನಿಪುರ, ಅಣ್ಣಪುರ ಗ್ರಾಮಗಳು ಸೇರಿದಂತೆ ಹಲವು ಹಳ್ಳಿಗಳಲ್ಲಿ ಅನೇಕ ದಿನಗಳಿಂದ ಕೇಬಲ್ ಕಳ್ಳತನ ನಡೆಯುತ್ತಿತ್ತು. ಇದರಿಂದ ರೈತರು ರಾತ್ರಿಯಿಡೀ ತೋಟಕ್ಕೆ ಹೋಗಿ ಕಾಯುತ್ತಿದ್ದರು. ಇಂದು ಖದೀಮ ಬೋರ್ವೆಲ್ ಕೇಬಲ್ ಕತ್ತರಿಸುತ್ತಿದ್ದನು. ಇದನ್ನು ಗಮನಿಸಿದ ರೈತರು ಆರೋಪಿಯನ್ನು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದರು.
ಆರೋಪಿ ಲಕ್ಷಾಂತರ ಮೌಲ್ಯದ ಕೇಬಲ್ ಹಾಗೂ ಅಡಿಕೆ ಕಳವು ಮಾಡಿದ್ದರೂ ಕೂಡ ಮಾಯಕೊಂಡ ಠಾಣಾ ಪೊಲೀಸರು ಏನೂ ಕ್ರಮ ತೆಗೆದುಕೊಂಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.