ದಾವಣಗೆರೆ : ಅವರದ್ದೊಂದು ಪುಟ್ಟ ಸಂಸಾರ. ಚಿಕ್ಕ ಮನೆ. ಅದರ ಹೆಸರು 'ದೇವರ ಮನೆ'. ನೆಮ್ಮದಿಯಿಂದ ಸಂಸಾರ ಸಾಗಿಸುತ್ತಿದ್ದ ಕುಟುಂಬ.. ಆದರೆ, ಅದೇನಾಯ್ತೋ ಗೊತ್ತಿಲ್ಲ. ಇಡೀ ಕುಟುಂಬವೇ ಇದೀಗ ನೇಣಿಗೆ ಶರಣಾಗಿದೆ.
ನಿನ್ನೆ ರಾತ್ರಿ ಅದೇನಾಗಿದೆಯೋ ಏನೋ ಇದೇ ಮನೆಯೊಳಗಿನ ಯಜಮಾನ, ಆತನ ಪತ್ನಿ ಹಾಗೂ ಮಗ ಆತ್ಮಹತ್ಯೆ ಮಾಡಿಕೊಂಡಿದಾರೆ. ಇದನ್ನ ಕಂಡು ಸಂಬಂಧಿಕರಿಗೆ ತಡೆದುಕೊಳ್ಳಲಾಗ್ತಿಲ್ಲ. 46 ವರ್ಷದ ಕೃಷ್ಣನಾಯ್ಕ್, ಆತನ 35 ವರ್ಷದ ಹೆಂಡತಿ ಸರಸ್ವತಿ ಹಾಗೂ 7 ವರ್ಷದ ಮಗ ಧೃವ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಂಬಂಧಿಕರ ಮನೆಯಲ್ಲಿದ್ದ ಮಗ ಧೃವನನ್ನ ಈ ದಂಪತಿ ಕರೆಯಿಸಿಕೊಂಡಿದೆ. ರಾತ್ರಿ 8.30ಕ್ಕೆ ಬಾಗಿಲು ಹಾಕಿಕೊಂಡವರು ಬೆಳಗ್ಗೆವರೆಗೂ ತೆಗೆದಿರಲಿಲ್ಲ. ಪಕ್ಕದ ಮನೆಯವರು ಅನುಮಾನಗೊಂಡು ಬಾಗಿಲು ಒಡೆದಿದ್ದಾರೆ. ಆಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಮೃತನ ಮನೆಯ ಯಜಮಾನ ಕೃಷ್ಣ ನಾಯ್ಕ್‌ನ ಪತ್ನಿ ಸುಮಾ ಕಳೆದ ಒಂದು ವರ್ಷದಿಂದ ಪೈಲ್ಸ್ನಿಂದ ಬಳಲುತ್ತಿದ್ದಳು. ಆಸ್ಪತ್ರೆಗೆ ತೋರಿಸಿದ್ದರೂ ಹುಷಾರಾಗಿರಲಿಲ್ಲ. ಆಸ್ಪತ್ರೆಗೆ ಅಲೆದು ಅಲೆದು ಸುಸ್ತಾಗಿದ್ರು. ಜೊತೆಗೆ ಲಾರಿ ಚಾಲನೆ ಮಾಡುತ್ತಿದ್ದ ಕೃಷ್ಣನಾಯ್ಕ್‌ರನ್ನ ಕೆಲಸದಿಂದ ತೆಗೆಯಲಾಗಿತ್ತು.
ಇದರಿಂದ ಬರಿಗೈಯಾಗಿದ್ದ ಅವರು ಆಸ್ಪತ್ರೆಗೆ ಹಣ ಹೊಂದಿಸಿ ಹೊಂದಿಸಿ ಸುಸ್ತಾಗಿದ್ದರಂತೆ. ಜೊತೆಗೆ ಇವರಿಗೂ ಕೈಯಲ್ಲಿ ನರದ ತೊಂದರೆ ಇತ್ತು. ಇದೆಲ್ಲದರಿಂದ ಬೇಸತ್ತು ಪತ್ನಿ ಹಾಗೂ ಪತಿ ಆತ್ಮಹತ್ಯೆಗೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಅಳಿಯನ ಮನೆಯಲ್ಲಿದ್ದ ಮಗ ಧೃವನನ್ನ ಕರೆಸಿಕೊಂಡ ಕೃಷ್ಣನಾಯ್ಕ್ ಮಗನಿಗೆ ಹಾಗೂ ಮಡದಿ ಸುಮಾ ಇಬ್ಬರಿಗೂ ವಿಷ ಉಣಿಸಿದ್ದಾರೆ. ಬಳಿಕ ತಾನು ಬಾಗಿಲಿಗೆ ನೇಣು ಬಿಗಿದುಕೊಂಡಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಎಸ್‌ಪಿ ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಶ್ವಾನ ದಳ ಸಹ ಆಗಮಿಸಿ ಪರಿಶೀಲಿಸಿದೆ.
ಕೃಷ್ಣನಾಯ್ಕ್ ಎರಡು-ಮೂರು ವರ್ಷದ ಹಿಂದಷ್ಟೇ ಮನೆ ಕಟ್ಟಿ ಅದಕ್ಕೆ 'ದೇವರ ಮನೆ' ಎಂದು ಹೆಸರಿಟ್ಟಿದ್ದರಂತೆ. ಆದರೆ, ಈಗ ಆ ಮನೆಯಲ್ಲಿ ನೋವು ತುಂಬಿದೆ. ಈ ನಡುವೆ ಏನೂ ಅರಿಯದ ಕಂದನನ್ನು ಸಾಯಿಸಿದ್ದು ಯಾಕೆ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿದೆ. ಪೊಲೀಸರ ತನಿಖೆ ಬಳಿಕ ಸತ್ಯಾಸತ್ಯತೆ ಹೊರ ಬರಬೇಕಿದೆ.
ಓದಿ: ದಾವಣಗೆರೆ : ಒಂಟಿ ಮನೆಯಲ್ಲಿ ಮಾಲೀಕನನ್ನು ಕಟ್ಟಿ ಹಾಕಿ ಚಿನ್ನಾಭರಣ ದೋಚಿದ ಖದೀಮರು