ದಾವಣಗೆರೆ: ಪೊಲೀಸರ ನಿದ್ದೆಗೆಡಿಸಿದ್ದ ಡಿಪ್ಲೋಮಾ ಓದುತ್ತಿದ್ದ ಅಪ್ತಾಪ್ತ ವಿದ್ಯಾರ್ಥಿನಿಯೋರ್ವಳ ಫೇಕ್ ಕಿಡ್ನಾಪ್ ಹಾಗೂ ರೇಪ್ ಪ್ರಕರಣವನ್ನು ಕೇವಲ 24 ಗಂಟೆಯೊಳಗೆ ಖಾಕಿ ಪಡೆ ಭೇದಿಸಿದ್ದು, ಸುಳ್ಳು ಎಂಬುದನ್ನು ಸಾಬೀತು ಮಾಡಿದ್ದಾರೆ. ಅನಗತ್ಯವಾಗಿ ಗೊಂದಲಕ್ಕೀಡು ಮಾಡುವ ಸಾಧ್ಯತೆಯಿದ್ದ ಪ್ರಕರಣಕ್ಕೆ ಪೊಲೀಸರಿಂದ ಸುಖಾಂತ್ಯ ಕಂಡಿದೆ.
ಶಿವಮೊಗ್ಗ ಮೂಲದ 16 ವರ್ಷದ ಬಾಲಕಿಯೊಬ್ಬಳು ಬೆಣ್ಣೆನಗರಿ ದಾವಣಗೆರೆಯಲ್ಲಿ ಹಾಸ್ಟೆಲ್‌ನಲ್ಲಿದ್ದುಕೊಂಡು ಡಿಪ್ಲೋಮಾ ಓದುತ್ತಿದ್ದಳು. ಇದೇ ತಿಂಗಳ 21ರಂದು ಅವಳು ಕಾಲೇಜಿಗೆ ಹೋಗುವ ವೇಳೆ ಮೂವರು ಕಿಡ್ನಾಪ್ ಮಾಡಿದ್ದಾರೆ. ಬಳಿಕ ಹೊನ್ನಾಳಿಯ ತುಂಗಭದ್ರಾ ನದಿ ಸಮೀಪ ಅತ್ಯಾಚಾರ ಎಸಗಿದ್ದಾರೆ ಎಂದು ವಿದ್ಯಾರ್ಥಿನಿಯು ತನ್ನ ಕುಟುಂಬದವರೊಂದಿಗೆ, ಅದೇ ದಿನ ಸಂಜೆ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.
ದೂರು ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು, ಬಾಲಕಿ ನೀಡಿದ ಪ್ರತಿಯೊಂದು ವಿವರಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದರು. ಆಗ ಅವರ ನೆರವಿಗೆ ಬಂದಿದ್ದು ಕಿಡ್ನಾಪ್ ಮಾಡಿದ್ದ ಬಗ್ಗೆ ಮೊಬೈಲ್‌ನಿಂದ ಯುವಕನೊಬ್ಬನಿಗೆ ಹೋಗಿದ್ದ ಸಂದೇಶ.
ಈ ಮೆಸೇಜ್ ಸ್ವೀಕರಿಸಿದ ಯುವಕ ಹಾಗೂ ಕಳುಹಿಸಲಾಗಿದ್ದ ಮೊಬೈಲ್ ಹೊಂದಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಭಯಾನಕ ಸತ್ಯವಾದ ಹೊರ ಬಿದ್ದಿದೆ. ತಾನು ಪ್ರೀತಿಸಿದ ವ್ಯಕ್ತಿಯ ಗಮನ ತನ್ನತ್ತ ಸೆಳೆಯುವ ಸಲುವಾಗಿ ಅಪ್ತಾಪ್ತೆಯೇ ಫೇಕ್ ಕಿಡ್ನಾಪ್ ಹಾಗೂ ರೇಪ್ ಕಥೆ ಹೆಣೆದಿದ್ದಳು ಎಂಬುದು ಬಯಲಾಗಿದೆ.
ಇದನ್ನೂ ಓದಿ: ನಾಳೆ ಪಲ್ಸ್ ಪೋಲಿಯೋ ಅಭಿಯಾನ.. ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ
ತನಿಖೆ ವೇಳೆ ಮೆಸೇಜ್ ಕಳುಹಿಸಿದ್ದ ಮೊಬೈಲ್ ಮಾಲೀಕ ಅಮಾಯಕನಾಗಿದ್ಧಾನೆ. ಆತನಿಗೆ ಮೆಸೇಜ್ ಮಾಡಲೂ ಬರುವುದಿಲ್ಲ ಎಂಬುದು ಪೊಲೀಸರಿಗೆ ತಿಳಿದು ಬಂದಿದೆ. ತನ್ನ ಪ್ರಿಯಕರನ ಪ್ರೀತಿ ಪಡೆಯುವ ಸಲುವಾಗಿ ಬಾಲಕಿಯು ಪೊಲೀಸ್ ವ್ಯವಸ್ಥೆಗೇ ತಲೆನೋವು ತಂದಿದ್ದಳು ಎಂಬುದು ಬಹಿರಂಗಗೊಂಡಿದೆ. ಕೊನೆಗೂ ಪೊಲೀಸರಿಗೆ ಸತ್ಯ ತಿಳಿದ ಬಳಿಕ ಬಾಲಕಿಯೂ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ತನಿಖೆಯಲ್ಲಿ ಪೊಲೀಸರು ಕೊಂಚ ಯಾಮಾರಿದ್ದರೂ ಅಮಾಯಕರು ಜೈಲು ಪಾಲಾಗುವ ಸಾಧ್ಯತೆ ಇತ್ತು.