ಹರಿಹರ : ತಾಲೂಕಿನ ಹರಗನಹಳ್ಳಿಯ ತಮ್ಮ ಜಮೀನಿಗೆ ನೀರು ಹಾಯಿಸಲು ಹೋದ ವೇಳೆ ವಿದ್ಯುತ್ ಅವಘಡ ಸಂಭವಿಸಿ ರೈತನೋರ್ವ ಮೃತಪಟ್ಟ ಘಟನೆ ಪಟ್ಟಣದಲ್ಲಿ ನಡೆದಿದೆ.
ಮೃತ ರೈತ ಮಲ್ಲೇಶಪ್ಪ (45) ಎಂದಿನಂತೆ ಶನಿವಾರ ಬೆಳಗಿನ ಜಾವ ತಮ್ಮ ಜಮೀನಿಗೆ ನೀರು ಹಾಯಿಸಲು ತೆರಳಿದ್ದ ವೇಳೆ ವಿದ್ಯುತ್ ಅವಘಡ ಸಂಭವಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಂತರ ಪಕ್ಕದ ಜಮೀನಿನ ರೈತರು ಸಂಬಂಧ ಪಟ್ಟವರಿಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ. ಅಲ್ಲದೇ ರೈತನ ಸಾವಿಗೆ ಬೆಸ್ಕಾಂ ಅಚಾತುರ್ಯ ಕಾರಣವೆಂದು ಸ್ಥಳೀಯ ರೈತರು ಪ್ರತಿಭಟನೆ ನಡೆಸಿದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಸ್ಥಳಾಂತರಿಸಲು ಮುಂದಾದ ವೇಳೆ ಬೆಸ್ಕಾಂ ಹಾಗೂ ತಾಲೂಕು ಆಡಳಿತ ಸ್ಥಳಕ್ಕೆ ಆಗಮಿಸಬೇಕು, ಅಲ್ಲಿಯವರೆಗೂ ಶವವನ್ನು ಸ್ಥಳಾಂತರಿಸಲು ಬಿಡುವುದಿಲ್ಲ ಎಂದು ರೈತರು ಪಟ್ಟುಹಿಡಿದು ಪ್ರತಿಭಟನೆಗೆ ಮುಂದಾದರು. ನಂತರ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಕೆ.ಬಿ ರಾಮಚಂದ್ರಪ್ಪ ಹಾಗೂ ಬೆಸ್ಕಾಂ ಅಧಿಕಾರಿಗಳು ರೈತರ ಬೇಡಿಕೆಯನ್ನು ಆಲಿಸಿ, ಮೃತ ವ್ಯಕ್ತಿಯ ಸಾವಿಗೆ ಬೆಸ್ಕಾಂ ಅವಘಡವೇ ಕಾರಣವಾದ್ದರಿಂದ ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದರು.
ತಹಸೀಲ್ದಾರ್ ಮಾತನಾಡಿ ಮೃತರ ಕುಟುಂಬಕ್ಕೆ ಸರ್ಕಾರದಿಂದ ದೊರೆಯುವ ಪರಿಹಾರ ಕೊಡಿಸುವ ಪ್ರಯತ್ನ ಮಾಡುವುದಾಗಿ ಹಾಗೂ ವಿದ್ಯುತ್ ಸರಬರಾಜಿನ ಸಮಯ ಬದಲಾವಣೆ ಬಗ್ಗೆ ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತನಾಡುವ ಭರವಸೆಯನ್ನು ನೀಡಿದರು.