ದಾವಣಗೆರೆ: ಈ ಸರ್ಕಾರಿ ಶಾಲೆ ಯಾವುದೇ ಖಾಸಗೀ ಶಾಲೆಗಿಂತಲೂ ಕಡಿಮೆ ಏನಿಲ್ಲ. ಶಿಕ್ಷಕರೊಬ್ಬರ ಇಚ್ಛಾಶಕ್ತಿಯಿಂದ ಖಾಸಗಿ ಶಾಲೆಗಳನ್ನು ಮೀರಿಸುವಷ್ಟು ಮಟ್ಟಿಗೆ ಈ ಶಾಲೆ ಬೆಳೆದು ನಿಂತಿದೆ. ಆದರೆ, ಸರ್ಕಾರ ಅಂತಹ ಶಿಕ್ಷಕರನ್ನೇ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ..
ಬಣ್ಣ ಬಣ್ಣದ ಚಿತ್ತಾರಗಳಿಂದ ಸಿಂಗಾರಗೊಂಡಿರುವ ಶಾಲೆ.. ಶಾಲೆಯಲ್ಲಿ ಜೋಡಿಸಿರುವ ಕಂಪ್ಯೂಟರ್, ಲ್ಯಾಪ್ ಟಾಪ್, ಸ್ಮಾರ್ಟ್ ಕ್ಲಾಸ್ಗಾಗಿ ಹಾಕಿರುವ ಪ್ರೊಜೆಕ್ಟರ್ಗಳು.ಇವನ್ನೆಲ್ಲ ನೋಡಿ ಯಾವುದೋ ಖಾಸಗಿ ಶಾಲೆ ಅಂದುಕೊಂಡ್ರಾ? ಹಾಗಿದ್ರೆ, ನಿಮ್ಮ ಊಹೆ ತಪ್ಪು.. ಇದು ದಾವಣಗೆರೆ ತಾಲೂಕಿನ ಬೊಮ್ಮೇನಹಳ್ಳಿ ಸರ್ಕಾರಿ ಶಾಲೆಯ ಚಿತ್ರಣವಿದು. ಒಂದರಿಂದ ಎಂಟನೇ ತರಗತಿವರೆಗೆ ಇರುವ ಈ ಶಾಲೆಯಲ್ಲಿ 6 ಕಂಪ್ಯೂಟರ್, 6 ಲ್ಯಾಪ್ ಟಾಪ್, 2 ಪ್ರೊಜೆಕ್ಟರ್ ಗಳಿವೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸ್ಮಾರ್ಟ್ ಕ್ಲಾಸ್ ಕೂಡ ಆರಂಭ ಮಾಡಲಾಗಿದೆ. ಇದಕ್ಕೆಲ್ಲ ಕಾರಣ ಈ ಶಾಲಾ ಶಿಕ್ಷಕ ಕೆ.ಪಿ.ಆಂಜನೇಯ.
ಆಂಜನೇಯ ಅವರು, ಹಳೇ ವಿದ್ಯಾರ್ಥಿಗಳ ಸಂಘ ಸ್ಥಾಪಿಸಿ ಅವರ ಸಹಾಯದಿಂದ ಸುಮಾರು 20 ಲಕ್ಷ ರೂಪಾಯಿ ಹಣ ಕೂಡಿಸಿ ಇಂತಹ ಉತ್ತಮ ಕಾರ್ಯ ಮಾಡಿದ್ದಾರೆ. ಇದರ ಜೊತೆ ತಮ್ಮ ಮಕ್ಕಳು ಖಾಸಗಿ ಶಾಲೆಗೆ ಬೇರೆಡೆ ಹೋಗಬಾರದೆಂದು, ಇದೇ ಶಾಲೆಯಲ್ಲಿ ಎಲ್.ಕೆ.ಜಿ, ಯುಕೆಜಿ ಕೂಡ ಆರಂಭಿಸಿದ್ರಂತೆ.. ಜೊತೆಗೆ ಬೇರೆ ಗ್ರಾಮಗಳಿಂದ ಮಕ್ಕಳನ್ನು ಶಾಲೆಗೆ ಕರೆತರಲು ಕರಪತ್ರ, ಬ್ಯಾನರ್ ಕೂಡ ಅಳವಡಿಸಿದ್ದಾರೆ. ಅಲ್ಲದೆ ಶಾಲೆಗೆ ಮಕ್ಕಳನ್ನು ಕರೆತರಲು ಆಟೋ ವ್ಯವಸ್ಥೆ ಮಾಡಿದ್ದು ಶಾಲಾ ಹಾಜರಾತಿ ಕೂಡ ಹೆಚ್ಚಾಗಿದೆ. ಇಷ್ಟೆಲ್ಲ ಶಾಲಾಭಿವೃದ್ಧಿಗೆ ಶ್ರಮಿಸಿದ ಶಿಕ್ಷಕರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಮಾಡಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.. ಸರ್ಕಾರದ ಈ ನಿರ್ಧಾರಕ್ಕೆ ಸಹ ಶಿಕ್ಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.ಆಂಜನೇಯ ಅವರ ವರ್ಗಾವಣೆ ವಿರೋಧಿಸಿ ಮಕ್ಕಳು ಕೂಡ ಪ್ರತಿಭಟಿಸುತ್ತಿದ್ದಾರೆ. ಇನ್ನಾದ್ರು ಸರ್ಕಾರ ಎಚ್ಚೆತ್ತುಕೊಂಡು ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರ ವರ್ಗಾವಣೆ ರದ್ದುಗೊಳಿಸಬೇಕಿದೆ.