ದಾವಣಗೆರೆ: ನಗರದ ಪಿ.ಬಿ. ರಸ್ತೆಯ ಮುಜರಾಯಿ ಇಲಾಖೆಗೆ ಒಳಪಟ್ಟ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಅರ್ಚಕ ಪಿ. ಬಿ. ಲಿಂಗೇಶ್ ವಿರುದ್ಧ ಸಾರ್ವಜನಿಕರ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಸೇವೆಯಿಂದ ವಜಾ ಮಾಡಿ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಆದೇಶ ಹೊರಡಿಸಿದ್ದಾರೆ.
ದೇವಸ್ಥಾನಕ್ಕೆ ಬರುವ ಭಕ್ತಾದಿಗಳೊಂದಿಗೆ ಅಸಭ್ಯ ವರ್ತನೆ, ಮುಜರಾಯಿ ಅರ್ಚಕರಾಗಿದ್ದರೂ ಮೇಲಧಿಕಾರಿಗಳ ಅನುಮತಿ ಇಲ್ಲದೆ ದೇವಸ್ಥಾನಕ್ಕೆ ಸಂಬಂಧಿಸಿದ ಆಸ್ತಿಯ ಕುರಿತು ಪ್ರತಿಕಾ ಪ್ರಕಟಣೆ ಹೊರಡಿಸಿದ್ದಾರೆ. ದೇವಸ್ಥಾನದ ಪೂಜಾ ಕೈಂಕರ್ಯಗಳನ್ನು ನಿಗದಿತ ಅವಧಿಯಲ್ಲಿ ನೇರವೇರಿಸುತ್ತಿಲ್ಲ.
ಹೀಗಾಗಿ ದೇವಸ್ಥಾನಕ್ಕೆ ಬರುವ ಆದಾಯದಲ್ಲಿ ಕುಂಠಿತವಾಗುವಂತೆ ಮಾಡಿರುವ ಆರೋಪ ದೃಢ ಪಟ್ಟಿರುವ ಹಿನ್ನೆಲೆಯಲ್ಲಿ ಮಹಾಂತೇಶ ಬೀಳಗಿ ಅವರು ಅರ್ಚಕ ಪಿ. ಬಿ. ಲಿಂಗೇಶರನ್ನು ಸೇವೆಯಿಂದ ವಜಾ ಮಾಡಿ ಕೊಡಲೇ ದೇವಸ್ಥಾನದ ಬೀಗ, ಇತರ ಎಲ್ಲಾ ದಾಖಲೆಗಳು, ಒಡವೆ ಹಾಗೂ ವಸ್ತ್ರಗಳನ್ನು ತಹಶೀಲ್ದಾರ್ ಅವರ ಸುರ್ಪರ್ದಿಗೆ ನೀಡಲು ಆದೇಶ ಹೊರಡಿಸಿದ್ದಾರೆ.
ವಜಾಗೊಂಡ ಅರ್ಚಕ ಲಿಂಗೇಶ್ ಹೇಳೋದೇನು....?
ಸುಮಾರು 600 ವರ್ಷಗಳಿಂದ ನಮ್ಮ ವಂಶಸ್ಥರು ಬೀರಲಿಂಗೇಶ್ವರ ದೇವರಿಗೆ ಪೂಜೆ ನೆರವೇರಿಸಿಕೊಂಡು ಬರುತ್ತಿದ್ದೇವೆ. ಈ ಜಾಗ ತಮಗೆ ಸೇರಿರುವ ಕುರಿತು ಎಲ್ಲ ದಾಖಲಾತಿ ಹೊಂದಿದ್ದೇವೆ. ದೇವಸ್ಥಾನದ ಆಡಳಿತ ಮಂಡಳಿ ವಿನಾಕಾರಣ ಆರೋಪ ಮಾಡಿದೆ. ನನ್ನ ಮೇಲೆ ಮಾಡಿರುವ ಎಲ್ಲ ಆರೋಪಗಳು ಸುಳ್ಳು ಎಂದು ಅರ್ಚಕ ಲಿಂಗೇಶ್ ಸ್ಪಷ್ಟನೆ ನೀಡಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಒಂದು ನೋಟಿಸ್ ಬಂದಿದೆ. ಆದ್ರೆ, ಸ್ಥಳಕ್ಕೆ ತಹಶೀಲ್ದಾರ್, ಜಿಲ್ಲಾಧಿಕಾರಿ ಭೇಟಿ ನೀಡಿಲ್ಲ. ಆರೋಪಗಳ ಬಗ್ಗೆ ಸರಿಯಾದ ಮಾಹಿತಿ ಪಡೆಯದೇ ವಜಾಗೊಳಿಸಲಾಗಿದೆ. ದೇಗುಲಕ್ಕೆ ಬರುವ ಭಕ್ತಾದಿಗಳೊಂದಿಗೆ ಅನುಚಿತವಾಗಿ ವರ್ತಿಸಿಲ್ಲ. ಆದಾಯವೂ ಕುಂಠಿತವಾಗಿಲ್ಲ. ನಮ್ಮನ್ನು ಇಲ್ಲಿಂದ ಎತ್ತಂಗಡಿ ಮಾಡಲು ಈ ರೀತಿಯ ಷಡ್ಯಂತ್ರ ಮಾಡಲಾಗಿದೆ ಎನ್ನುವ ಅರ್ಚಕ ಲಿಂಗೇಶ್ ಸಹೋದರ ಶಿವಯೋಗಿಸ್ವಾಮಿ, ಈ ಸಂಬಂಧ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಸತ್ಯಾಸತ್ಯತೆ ಪರಾಮರ್ಶಿಸುವಂತೆ ಮನವಿ ಮಾಡುತ್ತೇವೆ ಎಂದಿದ್ದಾರೆ.