ಹರಿಹರ : ಬೆಂಗಳೂರಿನ ಹೆಲ್ಪಿಂಗ್ ಹ್ಯಾಂಡ್ ಗ್ರೂಪ್ ಹಾಗೂ ತಾಲೂಕಿನ ಬಿ ವಿ ವೀರಾಚಾರಿ ಗೆಳೆಯರ ಬಳಗದ ಸಂಯೋಗದಲ್ಲಿ ನಗರಸಭೆಯ ಆವರಣದಲ್ಲಿಂದು ಪೌರ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ ಮಾಡಲಾಯಿತು.
ಪತ್ರಕರ್ತರ ಸಂಘದ ಅಧ್ಯಕ್ಷ ಶೇಖರಗೌಡ ಮಾತನಾಡಿ, ಕಳೆದ ಮಾರ್ಚ್ ತಿಂಗಳಿಂದ ಕೋವಿಡ್-19 ಹತೋಟಿಗೆ ತರಲು ಹಗಲಿರುಳು ಶ್ರಮಿಸುತ್ತಿರುವ ನಗರಸಭೆಯ ಪೌರ ಕಾರ್ಮಿಕರು, ಆರೋಗ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಯ ಸೇವೆ ಅನನ್ಯವಾಗಿದೆ ಎಂದರು.
ಜನರ ಆರೋಗ್ಯ ರಕ್ಷಣೆಗಾಗಿ ಸರ್ಕಾರದ ಕ್ರಮಗಳನ್ನು ಪಾಲನೆ ಮಾಡುವುದರ ಮೂಲಕ ಜನರಿಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಾ ಬಂದಿದ್ದಾರೆ. ಇದರಿಂದ ವೈರಸ್ ಬಗೆಗಿನ ಅರಿವು ಮತ್ತು ಎಚ್ಚರಿಕೆಯನ್ನು ನಿರಂತರವಾಗಿ ಹೇಳುವ ಮೂಲಕ ನಗರದ ಪರಿಸರವನ್ನು ಸ್ವಚ್ಛವಾಗಿಡಲು ಶ್ರಮಿಸುತ್ತಿರುವ ಪೌರ ಕಾರ್ಮಿಕರ ಸೇವೆ ಶ್ಲಾಘನೀಯ ಎಂದರು.
ಶಿಕ್ಷಕ ಶರಣಕುಮಾರ ಹೆಗಡೆ ಮಾತನಾಡಿ, ಬೆಂಗಳೂರಿನಲ್ಲಿರುವ ನನ್ನ ಸ್ನೇಹಿತರು ತಮ್ಮದೇ ಆದ ಸ್ವಯಂ ಸೇವಾ ಸಂಸ್ಥೆಯನ್ನು ಕಟ್ಟಿ ಹಲವಾರು ವರ್ಷಗಳಿಂದ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ನಿಮ್ಮ ಸೇವೆಯನ್ನು ಹರಿಹರದ ಜನರಿಗೂ ಒದಗಿಸುವಂತೆ ಕೋರಿಕೊಂಡಾಗ ಒಪ್ಪಿಕೊಂಡು ಮೊದಲು ಪೌರ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಇವರ ಸೇವೆಯನ್ನು ಶಾಲೆಗಳ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದರು.