ದಾವಣಗೆರೆ : ವಾಯುಮಾಲಿನ್ಯದಿಂದಲೂ ಮುಂಬರುವ ದಿನಗಳಲ್ಲಿ ರೋಗ ಬರಲಿದೆ. ಕೇವಲ ಒಂದು ಗ್ರಾಂನಷ್ಟು ಇರುವ ಕೊರೊನಾ ಇಡೀ ವಿಶ್ವದ ನಿದ್ದೆ ಕೆಡಿಸಿದೆ. ಆದ್ರೆ, ಮುಂದೆ ಬರಲಿರುವ ಸೋಂಕು ತೂಕವಾಗಿರಲಿದೆ. ಎರಡರಿಂದ ಮೂರು ತಿಂಗಳಿನಲ್ಲಿ ಇದು ಗೊತ್ತಾಗಲಿದೆ.
ಮಾನಸಿಕವಾಗಿ ಮತ್ತಷ್ಟು ಜನರು ಕುಗ್ಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಮುಖ್ಯ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಅತ್ಯಂತ ಶ್ರೇಷ್ಠ ಜ್ಞಾನ ಉಳ್ಳವರೇ ಮನುಷ್ಯರು. ಆಗಾಗ ಅಜ್ಞಾನ, ಅವಿವೇಕತನದಿಂದ ವರ್ತಿಸುವುದರಿಂದ ಕೊರೊನಾದಂತಹ ರೋಗಗಳು ವಕ್ಕರಿಸುತ್ತಿವೆ. ವಿವೇಕ, ತಿಳುವಳಿಕೆ ಮೂಡಿಸುವ ಸಲುವಾಗಿಯೇ ಇಂತಹ ವಿಪತ್ತು ಎದುರಾಗುತ್ತಿರುವುದು ಎಂದು ಪ್ರತಿಪಾದಿಸಿದರು.
ಕೊರೊನಾ ಹೊಸ ರೋಗ ಅಲ್ಲ. ಇದು ಹಳೆಯ ಕಾಯಿಲೆ. ವಾಯುವಿನಿಂದ ಸೋಂಕು ಹರಡುವುದಿಲ್ಲ. ಈ ಹಿಂದೆ ಗಂಟಲು ಬೇನೆ, ಗಂಟಲು ಕೆರೆತ, ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಬಳಲಿ ಎರಡು ದಿನಗಳಲ್ಲಿ ಜನರು ಮರಣ ಹೊಂದುತ್ತಿದ್ದರು.
ಜನರು ಸ್ವಚ್ಛತೆ, ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕಾದ ಅವಶ್ಯಕತೆ ಇದೆ. ಮುಂಬರುವ ದಿನಗಳಲ್ಲಿ ಕೊರೊನಾ ಮತ್ತಷ್ಟು ಹೆಚ್ಚಾಗಲಿದೆ. ಈ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತೆ ಎಂದು ಹೇಳಿದ್ದೆ.
ಅದು ನಿಜವಾಗಿದೆ. ಅದೇ ರೀತಿಯಲ್ಲಿ "ಸಿರಿವಂತ ಮಗನೊಬ್ಬ ಆಳುವನು ಮುನಿಪುರವ'' ಎಂಬ ಭವಿಷ್ಯವಾಣಿ ನುಡಿದಿದ್ದೆ. ಆಗ ಖ್ಯಾತ ಉದ್ಯಮಿ ಡೊನಾಲ್ಡ್ ಟ್ರಂಪ್ ಅಮೆರಿಕಾ ದೇಶ ಆಳಿದರು. ಈ ಹಿನ್ನೆಲೆ ಭವಿಷ್ಯದಲ್ಲಿ ಅಪಾಯ ಮತ್ತಷ್ಟು ಹೆಚ್ಚಿದ್ದು, ಜನರು ಹೆಚ್ಚಾಗಿ ಜಾಗರೂಕರಾಗಿರಬೇಕೆಂದು ತಿಳಿಸಿದರು.