ದಾವಣಗೆರೆ: ಸಂಪುಟ ಪುನಾರಚನೆ ಸಿಎಂ ವಿವೇಚನೆಗೆ ಬಿಟ್ಟಿದ್ದು, ಪಕ್ಷದ ಚೌಕಟ್ಟಿನಲ್ಲಿ ಸಚಿವ ಸ್ಥಾನದ ಬಗ್ಗೆ ಚರ್ಚಿಸಬೇಕು ಎಂದು ಹೇಳುವ ಮೂಲಕ ಸಚಿವ ಭೈರತಿ ಬಸವರಾಜ್ ಅವರು ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಟಾಂಗ್ ನೀಡಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ಬಹಿರಂಗ ಹೇಳಿಕೆ ನೀಡಲ್ಲ ಎನ್ನುತ್ತಲೇ ಭಿನ್ನಮತ ವ್ಯಕ್ತಪಡಿಸುತ್ತಿದ್ದಾರೆ. ಇದು ಸರಿಯಲ್ಲ. ತಮ್ಮ ಬೇಡಿಕೆಗಳನ್ನು ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸಬೇಕು, ಸಚಿವ ಸ್ಥಾನದ ಆಕಾಂಕ್ಷಿಗಳು ಬಹಿರಂಗ ಹೇಳಿಕೆ ನೀಡಬಾರದೆಂದು ಪಕ್ಷದ ರಾಜ್ಯಾಧ್ಯಕ್ಷರು ಹೇಳಿಕೆ ನೀಡಿರುವುದು ಸ್ವಾಗತಾರ್ಹ ಎಂದು ಸಚಿವ ಸ್ಥಾನದ ಬಗ್ಗೆ ಭಿನ್ನಮತ ವ್ಯಕ್ತಪಡಿಸುತ್ತಿರುವವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಉಸ್ತುವಾರಿ ಹಂಚಿಕೆ ಬಗ್ಗೆ ಪ್ರತಿಕ್ರಿಯೆ: ನಾನು ದಾವಣಗೆರೆ ಜಿಲ್ಲೆಯವನಲ್ಲ, ಆದ್ರೂ ನನಗೆ ಈ ಜಿಲ್ಲೆ ಉಸ್ತುವಾರಿ ನೀಡಿದ್ದಾರೆ. ಸಿಎಂ ಅವರಿಗೆ ನನ್ನ ಮೇಲೆ ವಿಶ್ವಾಸವಿದೆ. ಕಳಂಕವಿಲ್ಲದೇ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ, ಇದೇ ಕಾರಣಕ್ಕೆ ನನಗೆ ದಾವಣಗೆರೆ ಜಿಲ್ಲೆ ಉಸ್ತುವಾರಿ ನೀಡಿದ್ದಾರೆ ಎಂದರು.
ಇದನ್ನೂ ಓದಿ: ನಾನು ಇಲ್ಲಿನ ಸಚಿವ.. ಪಾಕಿಸ್ತಾನ, ಬಾಂಗ್ಲಾದೇಶದ ಉಸ್ತುವಾರಿ ಕೊಡೋಕಾಗಲ್ಲ: ಉಮೇಶ್ ಕತ್ತಿ ಖಡಕ್ ಪ್ರತಿಕ್ರಿಯೆ
ಯಾರು ಕಾಂಗ್ರೆಸ್ ಹೋಗುವುದಿಲ್ಲ: ನಮ್ಮ ಕೆಲ ಸಚಿವರು ಕಾಂಗ್ರೆಸ್ ಹೋಗುತ್ತಾರೆ ಎಂಬುದು ಊಹಾಪೋಹ. ಕಾಂಗ್ರೆಸ್ ನಾಯಕರು ಹತಾಶರಾಗಿ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ. ನಮ್ಮಲ್ಲಿ ಯಾರೂ ಬಿಜೆಪಿ ತೊರೆಯುವರಿಲ್ಲ. ಸೂಕ್ತ ಸಮಯಕ್ಕಾಗಿ ಕಾಂಗ್ರೆಸ್ ನಾಯಕರು ಕಾಯುವ ಅಗತ್ಯವಿಲ್ಲ. ಅವರ ಸಂಪರ್ಕದಲ್ಲಿರುವ ಬಿಜೆಪಿ ಸಚಿವರು, ಶಾಸಕರ ಹೆಸರು ಬಹಿರಂಗಪಡಿಸಲಿ, ಅವರ ಹೇಳಿಕೆಗೆ ನಾವು ಹೆದರುವುದಿಲ್ಲ. ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ. ಕಮಲದ ಗುರುತಿನ ಅಡಿ, ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ತಿಳಿಸಿದರು.
ದಾವಣಗೆರೆಗೊಂದು ಸಚಿವ ಸ್ಥಾನ ನೀಡಬೇಕೆಂಬ ಬೇಡಿಕೆಗೆ ಬೆಂಬಲ: ಸರ್ಕಾರ ಹೇಗೆ ಅಸ್ತಿತ್ವಕ್ಕೆ ಬಂತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ದಾವಣಗೆರೆಗೊಂದು ಸಚಿವ ಸ್ಥಾನ ನೀಡಬೇಕು ಎಂಬುದರಲ್ಲಿ ನಾನೂ ಒಬ್ಬ. ಇದೇ ಕಾರಣಕ್ಕೆ ಆಕಾಂಕ್ಷಿಗಳೆಲ್ಲರಿಗೂ ಸಚಿವ ಸ್ಥಾನ ನೀಡಲು ಆಗಲ್ಲ. ಸಚಿವ ಸ್ಥಾನ ನೀಡೋದು ಸಿಎಂ ವಿವೇಚನೆಗೆ ಬಿಟ್ಟ ವಿಚಾರ ಎಂದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ