ದಾವಣಗೆರೆ: ನಗರದ ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಕಚೇರಿಯ ಮ್ಯಾನೇಜರ್ ಮತ್ತು ಸಿಬ್ಬಂದಿ ಜಗಳ ಈಗ ಬೀದಿಗೆ ಬಿದ್ದಿದೆ. ದಿನಗೂಲಿ ನೌಕರಿ ಮಾಡುತ್ತಿರುವ ಮಹಿಳೆಗೆ ಮ್ಯಾನೇಜರ್ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಈಗ ಮ್ಯಾನೇಜರ್ ಸಹ ಪೊಲೀಸರಿಗೆ ದೂರು ನೀಡಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಇದೇ ಕಚೇರಿಯಲ್ಲಿ ಸವಿತಾ ಎಂಬ ಮಹಿಳೆ ದಿನಗೂಲಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಕೆಲ ದಿನಗಳ ಹಿಂದೆ ನಿಗಮದ ವ್ಯವಸ್ಥಾಪಕ ರೇವಣ್ಣ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಂಘಟನೆಗಳು ಹಾಗೂ ಮಾಧ್ಯಮದವರ ಸಮ್ಮುಖದಲ್ಲಿ ರಂಪಾಟ ಮಾಡಿದ್ದರು. ಈ ವೇಳೆ ಕಚೇರಿಯಲ್ಲಿ ಕಣ್ಣೀರು ಹಾಕಿದರಲ್ಲದೇ,ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಆದರೆ, ಇದಕ್ಕೆ ಸಂಬಂಧಿಸಿದಂತೆ ನಿಗಮದ ಸಿಬ್ಬಂದಿ ಸವಿತಾ ತಮ್ಮ ಮೇಲೆ ವಿನಾ ಕಾರಣ ಆರೋಪ ಮಾಡಿದ್ದಾರೆ. ಈ ಆರೋಪ ಮಾಡುವ ಕುರಿತಂತೆ ಸತ್ಯಾಸತ್ಯತೆ ಪರಿಶೀಲಿಸುವಂತೆ ಪೊಲೀಸ್ ಠಾಣೆಗೆ ಸವಿತಾ ವಿರುದ್ಧ ಮ್ಯಾನೇಜರ್ ದೂರು ನೀಡಿದ್ದಾರೆ. ಈ ದೂರಿನಲ್ಲಿ ಮಹಿಳೆ ತಮ್ಮ ಮೇಲೆ ಕೂಗಾಡಿ ರಂಪಾಟ ನಡೆಸಿದ್ದು, ಯಾಕೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಸವಿತಾ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದು, ಆಕೆಯ ಪತಿಯು ನಿಗಮದ ಕಚೇರಿಯಲ್ಲಿ ಕುಳಿತು ವ್ಯವಹಾರ ಮಾತನಾಡುವ ವಿಡಿಯೋ, ದಾವಣಗೆರೆ ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರ ಬಗ್ಗೆ ಕೇವಲವಾಗಿ ಮಾತನಾಡುವ ವಿಡಿಯೋವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿ, ಮ್ಯಾನೇಜರ್ ರೇವಣ್ಣ ತಮ್ಮ ಮೇಲಿನ ಆರೋಪ ನಿರಾಕರಿಸಿದ್ದಾರೆ. ಕಳೆದ 24 ದಿನಗಳಿಂದ ಇಬ್ಬರು ಮಹಿಳಾ ಉದ್ಯೋಗಿಗಳಿಗೆ ಮಾನಸಿಕ ಹಿಂಸೆ ನೀಡಿ, ಅಧಿಕಾರಿಯು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂಬ ಆರೋಪವನ್ನು ಸವಿತಾ ಮಾಡಿದ್ದರು.
ಮ್ಯಾನೇಜರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ ಅವರನ್ನು ಇಲ್ಲಿಂದ ಎತ್ತಂಗಡಿ ಮಾಡಿಸಲು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಸವಿತಾರ ಪತಿಯು ಜಿಲ್ಲಾಧಿಕಾರಿ ಹಾಗೂ ಸಿಇಒ ವಿರುದ್ಧ ಕೇವಲವಾಗಿ ಮಾತನಾಡಿರುವುದನ್ನು ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ. ಪತ್ನಿ ಕರ್ತವ್ಯದ ವೇಳೆ ಪತಿ ಮೂಗು ತೂರಿಸಿ ಅಧಿಕಾರಿಗಳನ್ನು ನಿಂದಿಸಿರುವುದರ ವಿರುದ್ಧ ತನಿಖೆ ನಡೆಸಬೇಕೆಂದು ನೌಕರ ವರ್ಗ ಪೊಲೀಸರಿಗೆ ಮನವಿ ಮಾಡಿದೆ.