ದಾವಣಗೆರೆ: ಕರ್ನಾಟಕ ಒಳ್ಳೆಯ ನಾಡು, ಜನರು ಒಳ್ಳೆಯವರು. ಆದರೆ, ಇಲ್ಲಿನ ನಿಮ್ಮ ನಾಯಕರು ಕೆಟ್ಟವರು. ಇಲ್ಲಿ ಶೇ.40ರಷ್ಟು ಕಮಿಷನ್ ಸರ್ಕಾರ ಇದೆ. ಗೃಹ ಸಚಿವ ಅಮಿತ್ ಶಾ ಕರ್ನಾಟಕದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಆದರೆ, ಕರ್ನಾಟಕದಲ್ಲಿ ತಮ್ಮದೇ ಸರ್ಕಾರ ಇದೆ ಎಂಬುವುದನ್ನು ಅಮಿತ್ ಶಾ ಮರೆತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದರು.
ದಾವಣರೆಗೆಯಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಇದೇ ಜಿಲ್ಲೆಯ ಅಮಿತ್ ಶಾ ಪಕ್ಷದ ನಾಯಕನ ಮಗನ ಬಳಿ ಎಂಟು ಕೋಟಿ ರೂಪಾಯಿ ಹಣ ಪತ್ತೆಯಾಗಿದೆ. ಆದರೆ, ಆತನ ಬಂಧನವಾಗಿಲ್ಲ. ಬದಲಿಗೆ ಮುಂದಿನ ದಿನಗಳಲ್ಲಿ ಆತನಿಗೆ ಯಾವುದೋ ಪ್ರಶಸ್ತಿ ಕೊಡಲಾಗುತ್ತದೆ. ಆದರೆ, ಒಂದು ರೂಪಾಯಿ ಭ್ರಷ್ಟಾಚಾರ ಮಾಡದಿದ್ದರೂ ನಮ್ಮ ಪಕ್ಷದ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿದ್ದಾರೆ. ನೂರು ಕೋಟಿ ರೂಪಾಯಿ ಲೂಟಿ ಮಾಡಲಾಗಿದೆ ಎಂದು ಮನೀಶ್ ವಿರುದ್ಧ ಆರೋಪಿಸಿದ್ದರು. ಆದರೆ, ಇಡೀ ಮನೆ ಜಾಲಾಡಿದರೂ ಕೇವಲ 10 ಸಾವಿರ ರೂ. ಸಿಕ್ಕಿದೆ. ಆದ್ರೆ ಬಿಜೆಪಿಯಲ್ಲಿ ಚೋರರಿದ್ದಾರೆ ಎಂದು ದೂರಿದರು.
ಕರ್ನಾಟಕದಲ್ಲಿ ಈ ಹಿಂದೆ ಶೇ.20ರಷ್ಟು ಕಮಿಷನ್ ಸರ್ಕಾರ ಎಂದು ಪ್ರಧಾನಿ ಮೋದಿ ಹೇಳಿದ್ದರು. ತಮ್ಮ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ತೆಗೆದುಕೊಂಡು ಬನ್ನಿ ಕರೆ ನೀಡಿದ್ದರು. ಆದರೆ, ಈಗ ಶೇ.40 ಕಮಿಷನ್ ಸರ್ಕಾರ ಇದೆ. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದೊಂದಿಗೆ ಭ್ರಷ್ಟಾಚಾರವೂ ಡಬಲ್ ಆಗಿದೆ. ಈ ಬಾರಿ ಡಬಲ್ ಎಂಜಿನ್ ಸರ್ಕಾರವನ್ನೂ ಮಾತ್ರ ಆಯ್ಕೆ ಮಾಡಬೇಡಿ. ಮಾಡಿದರೆ ಮುಂದೆ ಶೇ.80ರಷ್ಟು ಕಮಿಷನ್ ಆಗಲಿದೆ ಎಂದು ಟೀಕಾ ಪ್ರಹಾರ ಮಾಡಿದರು.
ನಮ್ಮದು ಹೊಸ ಇಂಜಿನ್. ಈ ಹೊಸ ಇಂಜಿನ್ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕು. ಕಳೆದ ಎರಡು ವರ್ಷಗಳಿಂದ ಶೇ.40 ಕಮಿಷನ್ ಬಗ್ಗೆ ಗುತ್ತಿಗೆದಾರರು ಪ್ರಧಾನಿಗೆ ಪತ್ರ ಬರೆಯುತ್ತಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ 82 ವರ್ಷದ ಕೆಂಪಣ್ಣ ಅವರನ್ನು ಜೈಲಿಗೆ ಕಳುಹಿಸಿದರು. ಇದು ನಾಚಿಕೆಗೇಡಿನ ಸರ್ಕಾರ ಎಂದು ಕೇಜ್ರಿವಾಲ್ ಕಿಡಿಕಾರಿದರು.
ಹಿಂದೂಗಳ ಮಠಗಳಿಂದ ಕಮಿಷನ್ಗೆ ಬೇಡಿಕೆ: ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಭ್ರಷ್ಟಾಚಾರದ ಬಗ್ಗೆ ಪತ್ರ ಬರೆದರೂ ಏನು ಮಾಡಲಾಗಿಲ್ಲ. ಖಾಸಗಿ ಶಾಲೆಗಳ ಸಂಘಟನೆಗಳು ಕೂಡ ಭ್ರಷ್ಟಾಚಾರದ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಿಂದೂಗಳ ಮಠಗಳಿಂದ ಶೇ.30ರಷ್ಟು ಕಮಿಷನ್ಗೆ ಬೇಡಿಕೆ ಇಡಲಾಗಿದೆ. ಶಾಲೆ, ಮಠ ಮತ್ತು ಗುತ್ತಿಗಾರರನ್ನೂ ನೀವು ಬಿಟ್ಟಿಲ್ಲ. ಬೆಂಗಳೂರಿನ ಗುಂಡಿಗಳನ್ನು ಮುಚ್ಚಲು 20 ಸಾವಿರ ಕೋಟಿ ಖರ್ಚು ಮಾಡಲಾಗಿದೆ ಅಂತೆ. ಆದರೆ, 20 ಗುಂಡಿಗಳನ್ನು ಮುಚ್ಚಲು ಸಾಧ್ಯವಾಗಿಲ್ಲ. ಪೊಲೀಸರು, ಪ್ರಾಧ್ಯಾಪಕರು ಲಂಚ ಕೊಟ್ಟು ನೇಮಕವಾಗುತ್ತಿದ್ದಾರೆ. ಅವರು ಮುಂದೆ ಹೇಗೆ ಜನಪರವಾಗಿ ಕೆಲಸ ಮಾಡುತ್ತಾರೆ ಎಂದು ಯೋಚಿಸಿ ಎಂದು ಕುಟುಕಿದರು.
ಕರ್ನಾಟಕದಲ್ಲಿ ಭ್ರಷ್ಟಾಚಾರ ರಹಿತ ಸರ್ಕಾರ ನೀಡಲಾಗುವುದು. ಪಂಜಾಬ್ನಲ್ಲಿ ನಮ್ಮ ಪಕ್ಷದ ಸಚಿವ, ಶಾಸಕರನ್ನೂ ಜೈಲಿಗೆ ಕಳುಹಿಸಲಾಗಿದೆ. ನನ್ನ ಮಗ ಕೂಡ ಭ್ರಷ್ಟಾಚಾರ ಮಾಡಿದರೂ ಜೈಲಿಗೆ ಹೋಗುತ್ತೇನೆ. ನಾವು ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್, ನೀರು, ಚಿಕಿತ್ಸೆ ನೀಡಲಾಗುವುದು. ಉತ್ತಮ ಶಾಲೆ, ವಿದ್ಯಾಭ್ಯಾಸ ನೀಡಲಾಗುವುದು. ಪ್ರಧಾನಿ, ಬಿಜೆಪಿಯವರಿಗೆ ಉತ್ತಮ ಶಾಲೆ, ಆಸ್ಪತ್ರೆಗಳನ್ನು ನೀಡಲಾಗುವುದು ಎಂದು ಹೇಳಲು ಸಾಧ್ಯವಾಗಲ್ಲ. ಯಾಕೆಂದರೆ, ಗುಜರಾತ್ನಲ್ಲಿ ಇಷ್ಟು ವರ್ಷ ಅಧಿಕಾರದಲ್ಲಿದ್ದರೂ ಒಳ್ಳೆಯ ಕೆಲಸವನ್ನು ಬಿಜೆಪಿಯವರು ಮಾಡಿಲ್ಲ ಎಂದು ದೂರಿದರು.
ಸಾಲ ಮನ್ನಾ ಮಾಡುತ್ತೇವೆ: ಅಲ್ಲದೇ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡಲಾಗುವುದು. ರೈತರ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಮುಂದೆ ಎಂದೂ ಕೂಡ ರೈತರು ಸಾಲದ ಸುಳಿಗೆ ಸಿಲುಕದಂತೆ ನಾವು ನೋಡಿಕೊಳ್ಳುತ್ತೇವೆ. ಕರ್ನಾಟಕದಲ್ಲಿ ನಮಗೆ ಒಂದು ಅವಕಾಶ ಮಾಡಿಕೊಡಿ ಎಂದು ಕೇಜ್ರಿವಾಲ್ ಮನವಿ ಮಾಡಿದರು. ಇದೇ ವೇಳೆ ತ್ರಿಪುರಾ ಸೇರಿ ಮೂರು ರಾಜ್ಯಗಳ ಚುನಾವಣಾ ಫಲಿತಾಂಶ ನಂತರದ ಭಾಷಣದಲ್ಲಿ ಮೋದಿ, ಆಮ್ ಆದ್ಮಿ ಪಕ್ಷದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಆ ರಾಜ್ಯಗಳ ಚುನಾವಣೆಯಲ್ಲಿ ನಾವು ಸ್ಪರ್ಧೆ ಮಾಡದೇ ಇದ್ದರೂ, ಆಪ್ ಬಗ್ಗೆ ಮಾತನಾಡಿದ್ದಾರೆ. ಮೋದಿ ಅವರಿಗೆ ನಮ್ಮ ಬಗ್ಗೆ ಭಯ ಹುಟ್ಟುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಕರ್ನಾಟಕದಲ್ಲಿ 40 ಪರ್ಸೆಂಟ್ ಸರ್ಕಾರ ಕಿತ್ತೊಗೆಯಲು ಆಪ್ ಬಲವರ್ಧನೆ: ಅರವಿಂದ ಕೇಜ್ರಿವಾಲ್
ದೆಹಲಿಯಂತೆ ಕರ್ನಾಟಕದಲ್ಲೂ ಉಚಿತ ನೀರು, ಶಾಲೆ, ಆಸ್ಪತ್ರೆ: ದೆಹಲಿ ಸರ್ಕಾರದ ಮಾದರಿಯಲ್ಲಿ ಇಲ್ಲೂ ಕೂಡ ಶಿಕ್ಷಣ, ನೀರು ಸರಬರಾಜು ಮತ್ತು ಆಸ್ಪತ್ರೆ, ವಿದ್ಯುತ್ ಸೇವೆಯನ್ನು ಉಚಿತವಾಗಿ ನೀಡುತ್ತೇವೆ. ಆಪ್ ನೀಡ್ತಿರುವ ಯೋಜನೆಗಳನ್ನು ಮೋದಿಯವರು ಕೊಡ್ತೀನಿ ಎಂದು ಧಮ್ ಇದ್ರೆ ಹೇಳಲಿ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 3000 ನಿರುದ್ಯೋಗ ಭತ್ಯೆ ನೀಡಲಾಗುವುದು, ರೈತರ ಸಾಲಮನ್ನಾ, ಎಂಎಸ್ಬಿ ಜಾರಿ ಮಾಡಿಸಲಾಗುವುದು ಎಂದು ಕೇಜ್ರೀವಾಲ್ ಘೋಷಣೆ ಮಾಡಿದರು.