ದಾವಣಗೆರೆ: ಬಸವಣ್ಣನನ್ನು 'ಸಾಂಸ್ಕೃತಿಕ ನಾಯಕ' ಎಂದು ಘೋಷಿಸಲು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಿಎಂ ಸಿದ್ದರಾಮಯ್ಯಗೆ ಆಗ್ರಹಿಸಿದರು.
ನಗರದಲ್ಲಿಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, "ಈಗಾಗಲೇ ಎಲ್ಲಾ ರಾಜ್ಯದಲ್ಲಿ ಆಯಾ ದಾರ್ಶನಿಕರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಲಾಗಿದೆ. ಆದ್ದರಿಂದ ಕರ್ನಾಟಕದಲ್ಲಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಲಿ. ಮುಖ್ಯಮಂತ್ರಿಗಳಿಗೆ ಈ ವಿಚಾರವಾಗಿ ಒತ್ತಾಯಿಸಲು ಬೆಂಗಳೂರಿಗೆ ಸಾಕಷ್ಟು ಲಿಂಗಾಯತ ಮಠಾಧೀಶರು ತೆರಳಿದ್ದರು. ನಾನು ಕೂಡ ಹೋಗ್ಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಹೋಗಲು ಸಾಧ್ಯವಾಗಿಲ್ಲ" ಎಂದರು.
"ಕೂಡಲ ಸಂಗಮ ಪಂಚಮಸಾಲಿ ಪೀಠದಲ್ಲಿ ಜನವರಿ 14ರಂದು 12ನೇ ಕೃಷಿ ಸಂಕ್ರಾಂತಿ ಆಚರಣೆ ಮಾಡಲಾಗುವುದು. ರಾಷ್ಟ್ರೀಯ ಬಸವ ಕೃಷಿ ಪಂಡಿತ ಪ್ರಶಸ್ತಿಯನ್ನು ಸಾಧಕರಿಗೆ ನೀಡಲಾಗುವುದು. ಈ ಸಂಬಂಧ ಇಬ್ಬರು ಸಾಧಕರ ಹೆಸರು ಸೂಚಿಸಲಾಗುವುದು ಮತ್ತು ಸಂಜೆಯ ಹೊತ್ತಿಗೆ ಆ ಹೆಸರುಗಳನ್ನು ಪ್ರಕಟಿಸಲಾಗುವುದು" ಎಂದು ತಿಳಿಸಿದರು.
ಇದಲ್ಲದೆ, "ಮೀಸಲಾತಿ ಪಾದಯಾತ್ರೆಯ ತೃತೀಯ ವರ್ಷಾಚರಣೆ ಮಾಡಲಾಗುತ್ತದೆ. ಅಂದು ಮೀಸಲಾತಿ ಹೋರಾಟದ ಬಗ್ಗೆ ಸಭೆ ನಡೆಸಿ ಚರ್ಚೆ ಮಾಡಲಾಗುವುದು. 2ಎ ಮೀಸಲಾತಿ, ಒಬಿಸಿ ಸೇರ್ಪಡೆ ವಿಚಾರವಾಗಿ ಕೂಡ ನಾವು ಚರ್ಚೆ ಮಾಡಲಿದ್ದೇವೆ. ಪಾದಯಾತ್ರೆ ಮೂಲಕ ಮೀಸಲಾತಿ ಹೋರಾಟ ಆರಂಭವಾಗಿದೆ. ಪಾದಯಾತ್ರೆ ಮೂಲಕ ನಮ್ಮ ಸಮಾಜ ಸಂಘಟನೆ ಆಗಿದೆ. 9 ಜಿಲ್ಲೆಗಳಲ್ಲಿ ಈ ಹೋರಾಟ ನಡೆದಿದೆ" ಎಂದರು.
"ಹಾವೇರಿಯ ಮೋಟೆಬೆನ್ನೂರಿನಲ್ಲಿ ನಮ್ಮ ಹೋರಾಟ ನಡೆಯುತ್ತದೆ. ಜನವರಿ 9ರಿಂದ 20ರೊಳಗೆ ಸಿಎಂ ಸಭೆ ನಡೆಸಿ ಮೀಸಲಾತಿ ಬಗ್ಗೆ ನಿರ್ಣಯ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು. ಆದರೆ ಇದುವರೆಗೂ ಸಿಎಂ ಯಾವುದೇ ಸ್ಪಷ್ಟವಾದ ನಿರ್ಣಯ ಪ್ರಕಟ ಮಾಡಿಲ್ಲ. ಯಾವುದೇ ಸಭೆ ಕೂಡ ಕರೆದಿಲ್ಲ. ಸಿಎಂಗೆ ಸ್ಪಷ್ಟ ಸಂದೇಶವನ್ನು ನೀಡುವ ಹೋರಾಟವನ್ನು ಮುಂದೆ ಮಾಡಲಾಗುವುದು. ಅಂದು ವಿಧಾನಸೌಧ ಮುತ್ತಿಗೆ ಹಾಕುವ ಕೆಲಸವನ್ನು ಕೈಬಿಟ್ಟಿದ್ದೆವು. ಇದೀಗ ಸಭೆ ಕರೆಯದೇ ಇರುವುದು ಬೇಸರ ತರಿಸಿದೆ" ಎಂದು ಹೇಳಿದರು.
ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಯಲ್ಲಿ ಭಾಗವಹಿಸದಿರುವ ಕಾಂಗ್ರೆಸ್ ನಾಯಕರ ನಿರ್ಧಾರಕ್ಕೆ ಸಿದ್ದರಾಮಯ್ಯ ಬೆಂಬಲ