ದಾವಣಗೆರೆ/ಧಾರವಾಡ : ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದ ಕುರಿತು ಹೈಕೋರ್ಟ್ ಮಧ್ಯಂತರ ತೀರ್ಪು ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶಾಲೆಗಳ ಪುನರ್ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಇಂದಿನಿಂದ 9,10ನೇ ತರಗತಿಗಳು ಪ್ರಾರಂಭ ಆಗಿವೆ. ಕೆಲ ವಿದ್ಯಾರ್ಥಿಗಳು ಹಿಜಾಬ್ ಕಳಚಿಟ್ಟು ತರಗತಿಗಳಿಗೆ ಆಗಮಿಸಿದರು.
ನಗರದ ಮೋತಿ ವೀರಪ್ಪ, ಸೀತಮ್ಮ ಶಾಲೆಯ ತರಗತಿಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭೇಟಿ ನೀಡಿ ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳಿಂದ ಮಾಹಿತಿ ಕಲೆ ಹಾಕಿ ಧೈರ್ಯ ತುಂಬಿದರು.
ಯಾವುದೇ ಅಂಜಿಕೆ ಇಲ್ಲದೇ ತರಗತಿಗಳಿಗೆ ಬನ್ನಿ. ಯಾರಾದರೂ ಒತ್ತಡ, ಭಯ ಪಡಿಸಿದರೆ ಕೂಡಲೇ ಮಾಹಿತಿ ನೀಡುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದರು. ದಾವಣಗೆರೆ ನಗರದ ಪ್ರತಿ ಶಾಲೆಗೂ ಕೂಡ ಭೇಟಿ ನೀಡುತ್ತಿರುವ ಜಿಲ್ಲಾಧಿಕಾರಿಗಳು, ಎಲ್ಲ ಮಕ್ಕಳಿಗೆ ಧೈರ್ಯ ತುಂಬಿದ್ದು ವಿಶೇಷವಾಗಿತ್ತು.
ಧಾರವಾಡದಲ್ಲಿ ಸಮವಸ್ತ್ರ ಪರಿಶೀಲನೆಗೆ ಪೊಲೀಸರು : ರಾಜ್ಯಾದ್ಯಂತ ಪ್ರೌಢಶಾಲೆ ಆರಂಭ ಹಿನ್ನೆಲೆ ಧಾರವಾಡದಲ್ಲಿ ಎಲ್ಲ ಶಾಲೆಗಳಿಗೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಸಮವಸ್ತ್ರ ಕಡ್ಡಾಯ ಪರಿಶೀಲನೆಗೆ ಪೊಲೀಸರ ನೇಮಕ ಮಾಡಲಾಗಿದೆ. ಪ್ರತಿ ಶಾಲೆಗೆ ಓರ್ವ ಸಿಬ್ಬಂದಿ ನೇಮಕ ಮಾಡಲಾಗಿದೆ. ವಿದ್ಯಾರ್ಥಿಗಳು ಸಹ ಸಮವಸ್ತ್ರ ಹಾಕಿಕೊಂಡು ಶಾಲೆಯತ್ತ ಮುಖ ಮಾಡುತ್ತಿದ್ದಾರೆ.
ಆರ್‌ಎನ್ ಶೆಟ್ಟಿ ಕ್ರೀಡಾಂಗಣ ಆವರಣದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬರು ಮನೆಯಿಂದ ಶಾಲೆಗೆ ಹಿಜಾಬ್ ಧರಿಸಿ ಆಗಮಿಸಿದ್ದರು. ಶಾಲೆ ಹೊರಗೆ ಹಿಜಾಬ್ ತೆಗೆದಿಟ್ಟು ವಿದ್ಯಾರ್ಥಿನಿ ಒಳ ಹೋದರು.
ಇದನ್ನೂ ಓದಿ : ಶಿವಮೊಗ್ಗ: ಹಿಜಾಬ್ ಧರಿಸಲು ಅವಕಾಶ ನೀಡದ್ದಕ್ಕೆ ಪರೀಕ್ಷೆ ಬಹಿಷ್ಕರಿಸಿದ 13 ವಿದ್ಯಾರ್ಥಿನಿಯರು