ದಾವಣಗೆರೆ : ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ದಿ. ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನದ ಅಂಗವಾಗಿ ಕಿಸಾನ್ ಮಜ್ದೂರ್ ಬಚಾವೋ ದಿವಸ್ ಹಾಗೂ ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆ ವಿರೋಧಿಸಿ ಸಹಿ ಸಂಗ್ರಹಿಸುವ ಅಭಿಯಾನವನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಯು ನಡೆಸಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ ಬಿ ಮಂಜಪ್ಪ, ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಯವರು ಸತ್ಯ ಮತ್ತು ಪ್ರಾಮಾಣಿಕತೆಗೆ ಹೆಸರಾದವರು. ಅಂತಹವರ ಆದರ್ಶ ಜೀವನ ಎಂದೆಂದಿಗೂ ಮಾದರಿ ಎಂದರು.
ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಗಂಗಾ ವಿ. ಬಸವರಾಜ್ ಮಾತನಾಡಿ, ಮಹಾತ್ಮ ಗಾಂಧಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ರೆ, ಲಾಲ್ ಬಹದ್ದೂರ್ ಶಾಸ್ತ್ರೀಯವರು ಜೈ ಜವಾನ್ ಜೈ ಕಿಸಾನ್ ಎನ್ನುವ ಘೋಷವಾಕ್ಯ ಹೇಳುವ ಮೂಲಕ ಸೈನಿಕರಿಗೆ ಎಷ್ಟು ಪ್ರಾಮುಖ್ಯತೆ ನೀಡಿದ್ದರೋ ಅಷ್ಟೇ ಪ್ರಾಮುಖ್ಯತೆಯನ್ನು ದೇಶದ ರೈತರಿಗೂ ನೀಡಿದ್ದರು ಎಂದು ಸ್ಮರಿಸಿದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅನಿತಾಬಾಯಿ ಮಾಲತೇಶ್ ಮಾತನಾಡಿ, ಮಹಾತ್ಮಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಪ್ರತಿ ಕೆಲಸದಲ್ಲೂ ಅವರ ಪತ್ನಿಯರ ಸಹಕಾರ ಇತ್ತು ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಕೆ ಎಸ್ ಬಸವಂತಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಕೆಪಿಸಿಸಿ ವಕ್ತಾರ ಡಿ ಬಸವರಾಜ್, ಲೀಗಲ್‍ಸೆಲ್ ಅಧ್ಯಕ್ಷ ಪ್ರಕಾಶ್ ಪಾಟೀಲ್ ಅವರು ಮಾತನಾಡಿ, ಬ್ರಿಟಿಷರ ವಿರುದ್ಧ ಹೋರಾಡಲು ಮಹಾತ್ಮಗಾಂಧಿಯವರ ನೇತೃತ್ವ ಯಶಸ್ವಿಯಾಯಿತು. ಇದನ್ನು ಇಂದಿನ ತಲೆಮಾರುಗಳಿಗೆ ತಿಳಿಸಬೇಕಾಗಿದೆ ಎಂದರು.
ಲಾಲ್ ಬಹದ್ದೂರ್ ಶಾಸ್ತ್ರೀಯವರು ದೇಶದ 2ನೇ ಪ್ರಧಾನಿಯಾಗಿ ದೇಶದ ರಕ್ಷಣೆ ವಿಷಯದಲ್ಲಿ ಎಲ್ಲಿಯೂ ಸಹ ರಾಜಿ ಮಾಡಿಕೊಳ್ಳದೇ ಕಾರ್ಯನಿರ್ವಹಿಸಿದರು. ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಯವರು ಇಂದಿನ ತಲೆಮಾರಿಗೆ ಮಾದರಿ ಆಗಿದ್ದು, ಪ್ರತಿಯೊಬ್ಬರು ಅವರ ಆದರ್ಶ ಪಾಲಿಸಬೇಕೆಂದು ಕರೆ ನೀಡಿದರು.