ದಾವಣಗೆರೆ: ದೇಶದಲ್ಲಿ ಕೊರೊನಾ ಉಲ್ಬಣವಾಗುವುದನ್ನು ನಿಯಂತ್ರಿಸಲು ಸರ್ಕಾರ ಕಳೆದ ವರ್ಷ ಲಾಕ್ ಡೌನ್ ವಿಧಿಸಿತ್ತು. ಆ ಸಂದರ್ಭದಲ್ಲಿ ಬಾಲಿವುಡ್ ನಟ ಸೋನು ಸೂದ್ ಸದ್ದಿಲ್ಲದೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದರು. ಅವರ ಮಾನವೀಯ ಕಾರ್ಯಗಳಿಗೆ ಮನಸೋತ ಬೆಣ್ಣೆನಗರಿ ದಾವಣಗೆರೆಯ ವ್ಯಕ್ತಿಯೊಬ್ಬರು 8 ಕಿ.ಮೀ ದೂರದಷ್ಟು ಉದ್ದದ ದಾರದಲ್ಲಿ ಸೋನು ಭಾವಚಿತ್ರ ಬಿಡಿಸಿ ಗಮನಸೆಳೆದಿದ್ದಾರೆ.
ನಗರದ ಭರತ್ ಕಾಲೋನಿಯ ಯುವಕ ಪ್ರದೀಪ್ ದೂದಾನಿ ದಾರದಲ್ಲಿ 'ರಿಯಲ್ ಹೀರೋ' ಸೋನು ಸೂದ್ ಅವರ ಭಾವಚಿತ್ರ ಬಿಡಿಸಿದ್ದಾರೆ.
ಕಪ್ಪು ಬಣ್ಣದ ದಾರದಲ್ಲಿ ಪ್ರದೀಪ್ 'ಥ್ರೆಡ್ ಆರ್ಟ್' ಚಿತ್ರವನ್ನು ಒಂದೂವರೆ ದಿನದಲ್ಲಿ ಬಿಡಿಸಿ ಸೋನು ಸೂದ್ಗೆ ಗೌರವ ಸಲ್ಲಿದ್ದಾರೆ. ಥ್ರೆಡ್ ಆರ್ಟ್ ಬಗ್ಗೆ ಬ್ರೆಜಿಲ್ ದೇಶದ ಕಲಾವಿದ ಹೆನ್ರಿ ಎಂಬವರಿಂದ ಪ್ರೇರಣೆ ಪಡೆದ ಯುವಕ, ಯಾರ ಚಿತ್ರ ಬಿಡಿಸಬೇಕೆಂಬ ಯೋಚನೆಯಲ್ಲಿದ್ದಾಗ, ಲಾಕ್ ಡೌನ್ ಅವಧಿಯಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಿದ ಸೋನು ಸೂದ್ ನೆನಪಾಗಿದ್ದಾರೆ.
ಪ್ರದೀಪ್ ತಾನು ಬಿಡಿಸಿದ ಚಿತ್ರದ ಸಂಪೂರ್ಣ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಅದನ್ನು ಗಮನಿಸಿದ ಸೋನು ಸೂದ್, ಪ್ರದೀಪ್ಗೆ ಎಲ್ಲಾ ಸೌಲಭ್ಯ ಕಲ್ಪಿಸಿಕೊಟ್ಟು ಮುಂಬೈನ ತನ್ನ ಮನೆಗೆ ಕರೆಸಿಕೊಂಡು ಭಾವಚಿತ್ರ ಸ್ವೀಕರಿಸಿದ್ದಾರೆ. ತಾನು ಸ್ವೀಕರಿಸಿದ ಚಿತ್ರವನ್ನು ಅವರು ತಮ್ಮ ಕೋಣೆಯಲ್ಲಿ ನೇತು ಹಾಕಿರುವ ಫೋಟೋವನ್ನು ಪ್ರದೀಪ್ಗೆ ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿದ್ದಾರೆ.