ದಾವಣಗೆರೆ: ನಾನು ಜಿಲ್ಲಾಧಿಕಾರಿಯಾಗಿ ನಿಮ್ಮ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ ಅಂತಾ ನಿಮಗೆ ಅನಿಸುತ್ತಿದೆಯಾ ಎಂದು ಡಿಸಿ ಮಹಾಂತೇಶ್ ಆರ್ ಬೀಳಗಿ ಕೇಳಿದ ಪ್ರಶ್ನೆಗೆ ಪ್ರತಿಭಟನಾಕಾರರು "ನೋ.. ನೋ.." ಎನ್ನುತ್ತಿದ್ದಂತೆ ಸಿಡಿಮಿಡಿಗೊಂಡು ಜಿಲ್ಲಾಧಿಕಾರಿಗಳು ಅಲ್ಲಿಂದ ತೆರಳಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶಿಷ್ಯವೇತನ ಬಿಡುಗಡೆಗೆ ಪಟ್ಟು ಹಿಡಿದಿರುವ ಜೆಜೆಎಂ ಮೆಡಿಕಲ್ ಕಾಲೇಜಿನ ಗೃಹ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಧರಣಿ ಕುಳಿತಿದ್ದರು. ಸಂಜೆ ಸ್ಥಳಕ್ಕೆ ಆಗಮಿಸಿದ ಡಿಸಿ ಮಹಾಂತೇಶ್ ಬೀಳಗಿ, ನಿಮಗೆ ಯಾರು ಗೌರವ ಕೊಟ್ಟಿಲ್ಲ ಹೇಳಿ. ನೀವು ಹೇಳಿದಂತೆ ಯಾರು ನಡೆದುಕೊಂಡಿಲ್ಲ. ಎಲ್ಲರು ಗೌರವ ನೀಡಿದ್ದಾರೆ ಎಂದರು.
ಸರ್, ಹಾಗಿದ್ದರೆ ಗೌರವ ಎಲ್ಲಿ..? ನಮ್ಮ ಬೇಡಿಕೆ ಈಡೇರಿಲ್ಲ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಇದಕ್ಕೆ ಮೈಕ್ ಹಿಡಿದು ಮಾತನಾಡಲು ಡಿಸಿ ಶುರು ಮಾಡಿದರು. ನಾನು ಜಿಲ್ಲಾಧಿಕಾರಿಯಾಗಿ ನಿಮ್ಮ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ ಅಂತಾ ನಿಮಗೆ ಅನಿಸುತ್ತಿದೆಯಾ ಎಂದು ಡಿಸಿ ಮಹಾಂತೇಶ್ ಆರ್ ಬೀಳಗಿ ಕೇಳಿದ ಪ್ರಶ್ನೆಗೆ ಪ್ರತಿಭಟನಾಕಾರರು "ನೋ... ನೋ.." ಎನ್ನುತ್ತಿದ್ದಂತೆ, ನಾವು ಕಾನುನೂ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿ ಅಲ್ಲಿಂದ ಹೊರಟರು.
ಬಳಿಕ ಮಾತನಾಡಿದ ಪ್ರತಿಭಟನಾಕಾರರು, ನಮ್ಮನ್ನು ಈ ರೀತಿಯಾಗಿ ಕಾಣುತ್ತಿರುವುದು ಬೇಸರ ತಂದಿದೆ. ಇಂಥ ಬೆಳವಣಿಗೆ ನಿರೀಕ್ಷಿಸಿರಲಿಲ್ಲ. ಡಿಸಿ ಅವರಿಂದ ಸಮಸ್ಯೆ ಬಗೆಹರಿಯುವ ವಿಶ್ವಾಸ ಇತ್ತು. ಆದರೆ, ನಮ್ಮ ಗೋಳು, ಕಷ್ಟ ಸರ್ಕಾರಕ್ಕೆ ಯಾಕೆ ಅರ್ಥವಾಗುತ್ತಿಲ್ಲ ಎಂಬುದು ಗೊತ್ತಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.