ದಾವಣಗೆರೆ: ಸೂಳೆಕೆರೆ ಏಷ್ಯಾದ ಎರಡನೇ ಅತಿದೊಡ್ಡ ಕೆರೆ. ಸಾವಿರಾರು ರೈತರ ಜೀವನಾಡಿ. ಸಾಕಷ್ಟು ನಗರಕ್ಕೆ ಕುಡಿಯುವ ನೀರನ್ನು, ಲಕ್ಷಾಂತರ ಎಕರೆ ಜಮೀನಿಗೆ ನೀರು ಪೂರೈಸುವ ಜೀವಸೆಲೆ. ಅದ್ರೆ ರಸ್ತೆ ಅಗಲೀಕರಣ ಮಾಡುವ ನೆಪದಲ್ಲಿ ಗುಡ್ಡದ ಕೆಲ ಭಾಗ ಬ್ಲಾಸ್ಟ್ ಮಾಡಿದ್ದರಿಂದ ಕೆರೆಯ ಕೆಲ ಭಾಗದಲ್ಲಿ ಕುಸಿತ, ಬಿರುಕು ಕಂಡಿದ್ದು, ರೈತರನ್ನು ಆತಂಕಕ್ಕೆ ದೂಡಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿರುವ ಸೂಳೆಕೆರೆಗೀಗ ಕಾಯಕಲ್ಪ ಬೇಕಿದೆ.
ಬಿರುಕು:
ಸುಮಾರು ಏಳು ನೂರು ವರ್ಷಗಳ ಇತಿಹಾಸ ಇರುವ ಸೂಳೆಕೆರೆ ಉಳಿಸಬೇಕಾಗಿದೆ. ಮಲ್ಪೆ ಮೊಳಕಾಲ್ಮೂರು ರಾಜ್ಯ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದರಿಂದ ಕೆರೆ ಏರಿ ಮೇಲಿರುವ ಗುಡ್ಡದ ಬಳಿ ಬ್ಲಾಸ್ಟ್ ಮಾಡಲಾಗಿದೆ. ಗುಡ್ಡ ಬ್ಲಾಸ್ಟ್ ಮಾಡಿದ ಪರಿಣಾಮ ಸೂಳೆಕೆರೆ ಏರಿ ಬದಿಯಲ್ಲಿ ಕೆಲ ಕಡೆ ಬಿರುಕು ಕಂಡು ಬಂದಿದೆ.
ಇದಲ್ಲದೇ ಸೂಳೆಕೆರೆಯಿಂದ ಸಾವಿರಾರು ರೈತರ ಜಮೀನಿಗೆ ನೀರುಣಿಸುವ ಸಿದ್ದನ ನಾಲೆಯ ಗೋಪುರ ಕೂಡ ಬಿರುಕು ಮೂಡಿದ್ದು, ಸಾಕಷ್ಟು ಹಾನಿಯಾಗುವ ಭೀತಿ ಎದುರಾಗಿದೆ.
ಕೆರೆಯ ಉಳಿವಿಗಾಗಿ ಹೋರಾಟಕ್ಕೆ ಸಜ್ಜು:
ಇನ್ನು ಸಿದ್ದನ ನಾಲೆ ಕೂಗಳತೆಯಲ್ಲಿ ಭೂಮಿ ಕುಸಿದಿದೆ. ಇದರಿಂದ ರೈತರಲ್ಲಿ ಆತಂಕ ಮೂಡಿಸಿದ್ದರೂ ಅಧಿಕಾರಿಗಳು ಮಾತ್ರ ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲದಂತೆ ವರ್ತಿಸುತ್ತಿದ್ದಾರೆ ಎನ್ನುವ ಅರೋಪವಿದೆ.
ಇದರಿಂದ ಸೂಳೆಕೆರೆ ಉಳಿವಿಗಾಗಿ ಹೋರಾಟದ ಹಾದಿ ಹಿಡಿಯಲು ಖಡ್ಗ ಸಂಘಟನೆಯ ಪದಾಧಿಕಾರಿಗಳು ತೆರೆಮರೆಯಲ್ಲಿ ಸಜ್ಜಾಗುತ್ತಿದ್ದಾರೆ. ಕೆರೆ ಉಳಿಸುವ ಕೆಲಸಕ್ಕೆ ಚನ್ನಗಿರಿಯ ಹಿರೇಮಠದ ಪೀಠಾಧ್ಯಕ್ಷರಾದ ಶಾಂತವೀರ ಸ್ವಾಮೀಜಿಯವರು ಕೂಡ ಬೆಂಬಲ ಸೂಚಿಸಿದ್ದಾರೆ.
ಆಕ್ರೋಶ:
ರಸ್ತೆ ಅಗಲೀಕರಣ ಮಾಡುವ ವೇಳೆ ಕೆರೆ ಏರಿ ಮೇಲಿರುವ ಗಡ್ಡದ ಕೆಲ ಭಾಗದಲ್ಲಿ ಬ್ಲಾಸ್ಟ್ ಮಾಡಿದ್ದರಿಂದ ಈ ಎಲ್ಲ ಅವಾಂತರಕ್ಕೆ ಕಾರಣ ಎಂಬುದು ಖಡ್ಗ ಸಂಘಟನೆಯ ಪದಾಧಿಕಾರಿಗಳ ವಾದ ಆಗಿದೆ. ಬ್ಲಾಸ್ಟ್ ಮಾಡಿದ್ದರಿಂದ ಇಡೀ ಕೆರೆಗೆ ಹಾನಿಯಾಗಿದ್ದು, ಸಾಕಷ್ಟು ಕಡೆ ಬಿರುಕು ಬಿಟ್ಟುಕೊಂಡಿದೆ. ಇನ್ನು ಕೆಲ ಕಡೆ ಕೆರೆ ಏರಿ ಕುಸಿದಿದ್ದು, ಭೂಮಿ ಕೂಡ ಬಾಯಿ ತೆರೆದಿದೆ. ಇನ್ನು ಭೂಮಿ ಕುಸಿದಿರುವುದನ್ನು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಕೆಲ ಹೆಗ್ಗಣಗಳು ಗುಂಡಿ ತೆಗೆದಿರಬಹುದೇನೋ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಇಂದು ರಾಜ್ಯದ 20ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರತಿಜ್ಞಾವಿಧಿ ಸ್ವೀಕಾರ
ಸಂಬಂಧಪಟ್ಟ ಅಧಿಕಾರಿಗಳು ಕೆರೆಯ ಕೆಲ ಭಾಗದಲ್ಲಿ ಮೂಡಿರುವ ಬಿರುಕು ಹಾಗು ಕುಸಿತವನ್ನು ಗಮನಿಸಿ ತಕ್ಷಣ ಕೆರೆಯನ್ನು ರಕ್ಷಿಸುವ ಕೆಲಸ ಮಾಡಬೇಕಿದೆ.