ದಾವಣಗೆರೆ : ನಗರೋತ್ಥಾನ ಯೋಜನೆಯಡಿ ಅನುದಾನ ಹಂಚಿಕೆಯಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ. ಎಲ್ಲವೂ ಸರಿಯಾಗಿದೆ ಎಂದು ಪಾಲಿಕೆಯ ಮೇಯರ್ ಅಜಯ್ ಕುಮಾರ್ ವಿಪಕ್ಷ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಬಿಜೆಪಿಯವರಿಗೆ ನಿಜವಾಗಿಯೂ ಅನುಭವದ ಕೊರತೆ ಇದೆ. ಗಂಟು ಹೊಡೆಯುವುದರಲ್ಲಿ, ಅಧಿಕಾರಿಗಳಿಗೆ ಹೆದರಿಸಿ ದುಡ್ಡು ಮಾಡುವುದರಲ್ಲಿ, ರಸ್ತೆ, ಚರಂಡಿ ಮಾಡಿಸಿ ಕಮೀಷನ್ ಪಡೆಯುವುದರಲ್ಲಿ ನಿಜವಾಗಿಯೂ ನಮಗೆ ಅನುಭವ ಇಲ್ಲ ಎಂದು ಕಾಂಗ್ರೆಸ್ಗೆ ತಿರುಗೇಟು ನೀಡಿದರು.
ಮಹಾನಗರ ಪಾಲಿಕೆಗೆ ಮಹಾತ್ಮಾ ಗಾಂಧಿ ವಿಕಾಸ ಯೋಜನೆಯಡಿ 2019ರ ಮಾರ್ಚ್ನಲ್ಲಿ 125 ಕೋಟಿ ರೂಪಾಯಿ ಬಿಡುಗಡೆಯಾದ ವೇಳೆ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆ ಸಂದರ್ಭದಲ್ಲಿ 41 ವಾರ್ಡ್ಗಳಿದ್ದವು. ಈಗ 45 ಕ್ಕೇರಿಕೆಯಾಗಿದೆ. ಎಲ್ಲಾ ವಾರ್ಡ್ಗಳಿಗೂ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಣ ಬಿಡುಗಡೆ ಮಾಡಬಹುದಿತ್ತು. ಆದ್ರೆ, ಮಾಡಿರಲಿಲ್ಲ.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್, ಸಂಸದರು, ಶಾಸಕರ ಸಮ್ಮುಖದಲ್ಲಿ ಚರ್ಚಿಸಿ ಕಾಂಗ್ರೆಸ್ನವರು ಈ ಹಿಂದೆ ನಿರ್ಧರಿಸಿದಂತೆಯೇ ಅನುದಾನ ನೀಡಲಾಗಿದೆ. ವಿಪಕ್ಷ ನಾಯಕ ಎ. ನಾಗರಾಜ್ ಸ್ವಲ್ಪ ಅಸಂಬದ್ಧ ಹೇಳಿಕೆ ಕೊಟ್ಟಿದ್ದಾರೆ. ಈ ರೀತಿ ಮಾತನಾಡಬಾರದು ಎಂದರು.