ದಾವಣಗೆರೆ: ಇದೇ ತಿಂಗಳ 15 ಹಾಗೂ 16ರಂದು ದುರ್ಗಾಂಬಿಕಾ ದೇವಿಯ ಜಾತ್ರೆ ನಡೆಯಲಿದೆ. ದೇವಾಲಯದ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ಪ್ರಾಣಿ ಬಲಿ ನಿಷೇಧಿಸಲಾಗಿದೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭಕ್ತರಿಗೆ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಈಗಾಗಲೇ ದೇವಾಲಯದ ಕಮಿಟಿಯವರನ್ನು ಕರೆಸಿ ಸಭೆ ಮಾಡಿ ಪ್ರಾಣಿ ಬಲಿ ಕೊಡುವಂತಿಲ್ಲ ಎಂದು ಸೂಚಿಸಲಾಗಿದೆ. ಇದು ಕಾನೂನು ಬಾಹಿರ ಎಂದು ತಿಳಿಸಲಾಗಿದ್ದು, ಇದರ ಬಗ್ಗೆ ಕಟ್ಟುನಿಟ್ಟಾಗಿ ನಿಗಾ ವಹಿಸಲು ಅಧಿಕಾರಿಗಳ ತಂಡ ರಚಿಸಲಾಗಿದೆ. ಇನ್ನು ಕೋಣ ಬಲಿ ಕೊಡುವ ಬದಲು ಅದರ ರಕ್ತವನ್ನು ಸಿರಿಂಜ್ ಮೂಲಕ ತೆಗೆದುಕೊಂಡು ದೇವಿಗೆ ಪೂಜೆ ಮಾಡಬಹುದು ಎಂದರು.
ಬೇವಿನ ಉಡುಗೆ, ಅರೆ ಬೆತ್ತಲೆ ಪೂಜೆ, ಉರುಳು ಸೇವೆ, ದೀಡ್ ನಮಸ್ಕಾರ ಇಂತಹ ಮೂಢನಂಬಿಕೆಗಳನ್ನು ಜಾತ್ರೆಯಲ್ಲಿ ಮಾಡಬಹುದು. ಆದ್ರೆ ಮಾನವನ ವ್ಯಕ್ತಿತ್ವದ ಘನತೆಗೆ ಕುಂದು ತರುವಂತಹ ರೀತಿಯಲ್ಲಿ ಆಚರಣೆ ಮಾಡುವಂತಿಲ್ಲ.
ಜಿಲ್ಲಾಡಳಿತದ ಸೂಚನೆ ಮೇರೆಗೆ ಮೂಢನಂಬಿಕೆಗಳ ಆಚರಣೆ ಮಾಡಿದ್ರೆ, ನಿಗಾ ವಹಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಇದನ್ನು ಭಕ್ತರು ಜನಸಾಮಾನ್ಯರು ಪಾಲಿಸುತ್ತಾರೆ ಎಂಬ ನಂಬಿಕೆ ನಮಗಿದೆ ಎಂದು ಜಿಲ್ಲಾಧಿಕಾರಿ ಭರವಸೆ ವ್ಯಕ್ತಪಡಿಸಿದರು.
ಕಂದಾಯ ದಾಖಲೆ ಮನೆ ಬಾಗಿಲಿಗೆ ಕಾರ್ಯಕ್ರಮ: 'ಕಂದಾಯ ದಾಖಲೆ ಮನೆ ಬಾಗಿಲಿಗೆ' ಎಂಬ ಕಾರ್ಯಕ್ರಮಕ್ಕೆ ಇದೇ ತಿಂಗಳ 12 ಕ್ಕೆ ಉಸ್ತುವಾರಿ ಸಚಿವರಾದ ಭೈರತಿ ಬಸವರಾಜ್ ಅವರು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: 'ಪುಂಡ ಪೋಕರಿಗಳು ಶಾಸಕರಾಗಿದ್ದಾರೆ, ವ್ಯವಸ್ಥೆ ಸರಿಪಡಿಸಲು ರೈತರು ವಿಧಾನಸೌಧ ಪ್ರವೇಶಿಸಲಿ'
3,23,431 ಜಾತಿ ಆದಾಯ ಪ್ರಮಾಣ ಪತ್ರಗಳು, 93, 510 ಅಟ್ಲಸ್ಗಳನ್ನು, 2,93,479 ಪಹಣಿಗಳನ್ನು, ಮುದ್ರಣ ಮಾಡಿ ಲಕೋಟೆಯಲ್ಲಿ ಹಾಕಿ ಮನೆ ಮನೆಗೆ ನೀಡುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ. ಮನೆ ಮನೆಗೆ ತಲುಪಿಸಿದ ಕಂದಾಯ ದಾಖಲೆಗಳಲ್ಲಿ ದೋಷಗಳು ಕಂಡುಬಂದಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳುವ ಅವಕಾಶ ಇರುತ್ತದೆ ಎಂದು ತಿಳಿಸಿದರು.
ತಹಸಿಲ್ದಾರ್, ಗ್ರಾಮ ಲೆಕ್ಕಾಧಿಕಾರಿ, ಸಹಾಯಕಾಧಿಕಾರಿಗಳನ್ನು ಬಳಸಿಕೊಳ್ಳುವ ಮೂಲಕ ಒಮ್ಮೆಲೆ ಕಂದಾಯದ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ರಾಜ್ಯದ ಸರ್ಕಾರದ ವಿನೂತನ ಕಾರ್ಯಕ್ರಮ ಸಿಎಂ ಬೊಮ್ಮಾಯಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಾಲನೆ ನೀಡಲಿದ್ದು, ಅದೇ ವೇಳೆ ದಾವಣಗೆರೆಯಲ್ಲಿ ಸಚಿವರಾದ ಭೈರತಿ ಬಸವರಾಜ್ ಅವರು ಚಾಲನೆ ನೀಡಲಿದ್ದಾರೆ.