ದಾವಣಗೆರೆ: ಕೊರೊನಾಗೆ ಜಿಲ್ಲೆಯಲ್ಲಿ ಹೆಚ್ಚಿನ ಜನ ಬಲಿಯಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸರ್ವೇಕ್ಷಣಾ ತಂಡ ಲ್ಯಾಬ್ ಟೆಸ್ಟ್ ಜಾಸ್ತಿ ಮಾಡುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಹಾಗೂ ತಜ್ಞ ವೈದ್ಯರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ವೈದ್ಯರ ತಂಡ ಹಾಗೂ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ನನಗೆ ತೃಪ್ತಿ ಇದೆ. ಆದರೆ ಎಲ್ಲೋ ಒಂದು ಕಡೆ ಸಾವಿನ ಪ್ರಮಾಣ ನಮ್ಮ ಕಾರ್ಯದಕ್ಷತೆಯನ್ನು ಪ್ರಶ್ನಿಸುವಂತಿದೆ. ನಮ್ಮಲ್ಲಿ ಸಾಕಷ್ಟು ತಜ್ಞ ವೈದ್ಯರು ಇದ್ದಾಗಿಯೂ ನಾವು ಎಡವುತ್ತಿದ್ದೇವೆ. ಇದನ್ನು ಸರಿಪಡಿಸಿಕೊಳ್ಳಬೇಕು ಎಂದರು.
ಎಷ್ಟೇ ಕೊರೊನಾ ಪ್ರಕರಣಗಳು ಬಂದರೂ ಅದನ್ನು ನಿಭಾಯಿಸಲು ಜಿಲ್ಲಾಡಳಿತ ಸಿದ್ಧವಾಗಿದೆ. ತಾಲೂಕುವಾರು ನೀಡಿರುವ ಮೊಬೈಲ್ ಕೋವಿಡ್ ಟೆಸ್ಟಿಂಗ್ ವಾಹನಗಳು ತೀವ್ರ ಅನಾರೋಗ್ಯದಿಂದಿರುವ ವ್ಯಕ್ತಿಗಳ ಮನೆಯ ಬಳಿಯೇ ಹೋಗಿ ಪರೀಕ್ಷೆಗೆ ಒಳಪಡಿಸಿ, ಈ ಮೂಲಕ ಆದಷ್ಟು ಬೇಗ ಸೋಂಕಿಗೆ ಸಿಲುಕಿರುವರನ್ನು ಹಾಗೂ ಸೋಂಕಿಗೆ ಒಳಗಾಗುವರನ್ನು ಪತ್ತೆ ಹಚ್ಚಬೇಕಾಗಿದೆ ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಮಾತನಾಡಿ, ಈ ಹಿಂದೆ ಕೆಲವರು ರೆಗ್ಯೂಲರ್ ಚೆಕ್ ಆಪ್‍ಗೆ ಒಳಗಾಗುತ್ತಿದ್ದರು. ಲಾಕ್‍ಡೌನ್ ನಂತರ ಈ ರೀತಿ ಮುಂಚಿತವಾಗಿ ತಪಾಸಣೆಗೆ ಒಳಗಾಗುವರು ಕಡಿಮೆಯಾಗಿದ್ದಾರೆ. ವೈದ್ಯಕೀಯ ಸಿಬ್ಬಂದಿ ಕೊರೊನಾ ಕಡೆ ಹೆಚ್ಚಿನ ಗಮನ ಹರಿಸಿದ್ದಾರೆ. ಬಿಪಿ, ಶುಗರ್ನಂತಹ ಕಾಯಿಲೆ ಇರುವವರು ಆಸ್ಪತ್ರೆಗೆ ಬರುವುದು ತಡ ಮಾಡುವುದರಿಂದ ಹೆಚ್ಚು ತೊಂದರೆಯಾಗುತ್ತಿದೆ ಎಂದು ಮಾಹಿತಿ ನೀಡಿದರು.
ತಜ್ಞ ವೈದ್ಯ ಡಾ. ಕಾಳಪ್ಪ ಮಾತನಾಡಿ, ಎಸ್.ಎಸ್. ಆಸ್ಪತ್ರೆಯಲ್ಲಿ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 4 ಮಂದಿ ಕೊನೆಯ 4 ಗಂಟೆ ಒಳಗೆ ನಮ್ಮ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಉಳಿದ 4 ಮಂದಿ 24 ಗಂಟೆಯ ಅವಧಿಯಲ್ಲಿ ದಾಖಲಾಗಿದ್ದಾರೆ. ಹೀಗೆ ಕಡೇ ಗಳಿಗೆಯಲ್ಲಿ ಆಸ್ಪತ್ರೆಗೆ ಬಂದರೆ ಇತರೆ ಕಾಯಿಲೆಯೊಂದಿಗೆ ಕೊರೊನಾ ಬಾಧಿತರಾದವರನ್ನು ಉಳಿಸುವುದು ಕಷ್ಟ ಎಂದರು.