ದಾವಣಗೆರೆ: ನಗರದ ಪಿ.ಜೆ. ಬಡಾವಣೆಯ ಖಾಸಗಿ ಕ್ಲಿನಿಕ್‌ನ ವೈದ್ಯ ದಂಪತಿ, ಒಂದು ವರ್ಷದ ಮಗು ಸೇರಿದಂತೆ ಒಟ್ಟು 13 ಮಂದಿಯಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ.
P-4093 ಹಾಗೂ P-4094 ಸಂಖ್ಯೆಯ ಖಾಸಗಿ ಕ್ಲಿನಿಕ್‌ನಲ್ಲಿ ನೇತ್ರ ತಜ್ಞರಾಗಿದ್ದ ಗಂಡ-ಹೆಂಡತಿಗೆ ಕೊರೊನಾ ತಗುಲಿದ್ದು, ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದೆ. ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಇನ್ನು ಒಂದು ವರ್ಷದ ಗಂಡು ಮಗು ಹಾಗೂ 5 ವರ್ಷದ ಬಾಲಕಿಯಲ್ಲಿಯೂ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗಂಡು ಮಗು ಸೇರಿ ನಾಲ್ವರು ಪುರುಷರು ಹಾಗೂ 5 ವರ್ಷದ ಬಾಲಕಿ ಸೇರಿ 9 ಮಹಿಳೆಯರಿಗೆ ಕೊರೊನಾ ವಕ್ಕರಿಸಿದೆ. ಇನ್ನು ಬುಧವಾರ ಮರಣ ಹೊಂದಿದ್ದ 83 ವರ್ಷದ ವೃದ್ದೆಗೂ ಪಾಸಿಟಿವ್ ಇರುವುದು ಗುರುವಾರ ದೃಢಪಟ್ಟಿದೆ. P 2819 ಸೋಂಕಿತರಿಂದ 5 ಮಂದಿ, P-2415 ಸೋಂಕಿತರಿಂದ ಐವರಿಗೆ ಸೋಂಕು ತಗುಲಿದ್ದರೆ, ಸಾವನ್ನಪ್ಪಿದ ವೃದ್ದೆಗೆ P-2560 ಸೋಂಕಿತರಿಂದ ತಗುಲಿದೆ. ವೈದ್ಯ ದಂಪತಿಗೆ ಸೋಂಕು ಎಲ್ಲಿಂದ ಬಂದಿರಬಹುದು ಎಂಬ ಬಗ್ಗೆ ಪತ್ತೆ ಹಚ್ಚಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಬೇರೆ ರಾಜ್ಯದಿಂದ ಬಂದ ಆರು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ವಿವಿಧ ರಾಜ್ಯಗಳಿಂದ ಜಿಲ್ಲೆಗೆ 243 ಮಂದಿ ಆಗಮಿಸಿದ್ದು, ಇವರ ಮೇಲೂ ನಿಗಾ ಇಡಲಾಗಿದೆ. ಮಾಹಿತಿ ನೀಡದೇ ಬಂದಿದ್ದ 147 ಮಂದಿಯನ್ನು ಪತ್ತೆ ಹಚ್ಚಿದ್ದು, ಕ್ವಾರಂಟೈನ್ ಮಾಡಲಾಗಿತ್ತು. ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಆದರೂ ಎಲ್ಲರ ಮೇಲೆ ಕಣ್ಣಿಟ್ಟಿದ್ದೇವೆ ಎಂದು ಹೇಳಿದರು.