ಹರಿಹರ: ಪ್ರಪಂಚಕ್ಕೆ ಮಾರಕವಾಗಿರುವ ಕೊರೊನಾ ವೈರಸ್‌ನಿಂದ ಹರಿಹರ ಜನತೆ ಭಯಭೀತರಾಗಿದ್ದಾರೆ. ರಾಜ್ಯದ ಮಧ್ಯ ಭಾಗವಾದ ಹರಿಹರ ನಗರದಲ್ಲಿ ತುರ್ತು ನಿಗಾ ಘಟಕಗಳ ಅವಶ್ಯಕತೆ ಇದೆ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ರಾಜ್ಯ ರಸ್ತೆ ಸಾರಿಗೆ ಸೇರಿದಂತೆ ಇತರೆ ಸಾರಿಗೆ ಮೂಲಕ ದಿನನಿತ್ಯ ಲಕ್ಷಾಂತರ ಪ್ರಯಾಣಿಕರು ಬಂದು ಹೋಗುತ್ತಾರೆ. ಅಂಕಿ-ಅಂಶದ ಪ್ರಕಾರ ಪ್ರತಿನಿತ್ಯ ಸರಿ ಸುಮಾರು ರಾಜ್ಯ ಸಾರಿಗೆ ಸಂಸ್ಥೆಯ ಸುಮಾರು 1800ಕ್ಕೂ ಹೆಚ್ಚು ಬಸ್ಗಳು ನಗರದ ನಿಲ್ದಾಣಕ್ಕೆ ಬರುತ್ತವೆ. ಇದೆ ರೀತಿ 30ಕ್ಕೂ ಹೆಚ್ಚು ರೈಲುಗಳು ಹಾಗೂ ಇತರೆ ಖಾಸಗಿ ಸಾರಿಗೆ ಸಂಸ್ಥೆಗಳ ಬಸ್ಗಳಲ್ಲಿ ಹೊರ ರಾಜ್ಯಗಳಿಂದ ಸಾವಿರರು ಪ್ರಯಾಣಿಕರು ಹರಿಹರದಲ್ಲಿ ಇಳಿದು ರಾಜ್ಯದ ಬೇರೆ ಬೇರೆ ನಗರ ಮತ್ತು ತಮ್ಮ ಗ್ರಾಮಗಳಿಗೆ ಪ್ರಯಾಣಿಸುತ್ತಾರೆ.
ಈಗಾಗಲೇ ಪ್ರತಿಷ್ಠಿತ ನಗರಗದ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ಬಂದತಹ ಪ್ರಯಾಣಿಕರನ್ನು ಪ್ರಾಥಮಿಕ ತಪಾಸಣೆಗೆ ಒಳಪಡಿಸಲು ತುರ್ತು ನಿಗಾ ಘಟಕ ತೆರೆಯಲಾಗಿದೆ. ಅದೇ ರೀತಿ ಹರಿಹರ ನಗರವೂ ಜಂಕ್ಷನ್ ಪ್ರದೇಶವಾಗಿರುವುದರಿಂದ ನಗರಕ್ಕೆ ಹೊರಗಿನಿಂದ ಬಂದತಹ ಪ್ರಯಾಣಿಕರಿಗೆ ಪ್ರಾಥಮಿಕ ಆರೋಗ್ಯ ತಪಾಸಣೆ ಅವಶ್ಯವಿದೆ. ಈ ಕಾರಣದಿಂದ ರೈಲ್ವೆ ಹಾಗೂ ಬಸ್ ನಿಲ್ದಾಣಗಳಲ್ಲಿ ಕೊರೊನಾ ವೈರಸ್ ಪತ್ತೆ ಹಚ್ಚುವ ತುರ್ತು ನಿಗಾ ಘಟಕವನ್ನು ಆರೋಗ್ಯ ಇಲಾಖೆ ಸ್ಥಾಪಿಸಬೇಕಾಗಿದೆ.
ಜಿಲ್ಲೆಯಲ್ಲಿ ಹಕ್ಕಿ ಜ್ವರವು ದಿನೇ ದಿನೆ ಹೆಚ್ಚಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಹೆಚ್ಚು ಕೋಳಿ ಫಾರಂಗಳು ಇರುವುದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚು ಸುರಕ್ಷೆ ನೀಡಬೇಕಾಗಿದೆ. ಜನರು ಪ್ರತಿನಿತ್ಯ ಜಿವನೋಪಾಯ ವಸ್ತುಗಳನ್ನು ಖರೀದಿಸಲು ನಗರಕ್ಕೆ ಬರುವುದು ಸರ್ವೆ ಸಮಾನ್ಯ. ಸೋಂಕು ಪೀಡಿತ ವ್ಯಕ್ತಿ ನಗರಕ್ಕೆ ಬಂದು ಹೋದರೆ ಈ ಭಾಗದಲ್ಲಿಯೂ ಕೊರೊನಾ ಸೋಂಕು ಹರಡುವ ಭೀತಿ ಇದೆ. ಹೀಗಾಗಿ ಬಸ್ ಹಾಗೂ ರೈಲ್ವೆ ನಿಲ್ದಾಣಗಳಿಗೆ ಬರುವಂತ ಪ್ರಯಾಣಿಕರನ್ನು ಪ್ರಾಥಮಿಕ ಘಟಕಗಳಲ್ಲಿ ತಪಾಸಣೆ ನಡೆಸಿದರೆ ಮುಂದೆ ಸಂಭವಿಸಬಹುದಾದ ಭಾರೀ ಅನಾಹುತವನ್ನು ತಪ್ಪಿಸಬಹುದಾಗಿದೆ. ಈ ದಿಸೆಯಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯಧಿಕಾರಿಗಳು ಹಾಗೂ ತಾಲೂಕು ಆಡಳಿತ ತುರ್ತು ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.