ದಾವಣಗೆರೆ: ತೀವ್ರ ಉಸಿರಾಟದ ತೊಂದರೆಯಿಂದ ಬೆಣ್ಣೆನಗರಿಯಲ್ಲಿ ಗುರುವಾರ ಓರ್ವ ಮಹಿಳೆ ಮೃತಪಟ್ಟಿದ್ದರೆ, ಇಬ್ಬರಿಗೆ ಸೋಂಕು ತಗುಲಿದೆ. ಇವರಿಬ್ಬರೂ ಸಹ ಫ್ಲೂನಿಂದ ಬಳಲುತ್ತಿದ್ದರು. ಇನ್ನು, ಇಂಥದ್ದೇ ಗುಣಲಕ್ಷಣಗಳಿಂದ ಬಳಲುತ್ತಿರುವ 72 ಮಂದಿ ಪತ್ತೆಯಾಗಿದ್ದು, ಇವರ ಗಂಟಲು ದ್ರವ ಪರೀಕ್ಷೆಗೆ ಸ್ಯಾಂಪಲ್ ಕಳುಹಿಸಿ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ.
ಕಳೆದ ನಾಲ್ಕೈದು ದಿನಗಳಲ್ಲಿ ಜಿಲ್ಲೆಯಲ್ಲಿ ಕೊರೊನಾ ಕೇಕೆಗೆ ಜನರು ಬೆಚ್ಚಿಬಿದ್ದಿದ್ದಾರೆ. ಜಾಲಿನಗರ, ಬಾಷಾನಗರ ಸೇರಿದಂತೆ 6 ಕಂಟೈನ್ಮೆಂಟ್ ಝೋನ್‌ಗಳಲ್ಲಿ ಕೊರೊನಾ ಹರಡುವಿಕೆ ಹೆಚ್ಚುತ್ತಿದೆ. ಇಂದು ಸಾವನ್ನಪ್ಪಿದ 55 ವರ್ಷದ 694 ಸಂಖ್ಯೆಯ ಸೋಂಕಿತ ಮಹಿಳೆ ತೀವ್ರ ಉಸಿರಾಟಯಿಂದ ಮೃತಪಟ್ಟಿದ್ದು, ಈ ರೀತಿಯ ಇನ್ನೂ 15 ಕೇಸ್‌ಗಳು ಇರುವುದು ಆಂತಕಕ್ಕೆ ಕಾರಣವಾಗಿದೆ.
ಸದ್ಯ ವೈದ್ಯರು ಪ್ರತಿದಿನ ಮೂರು ಬಾರಿ ಹೋಗಿ ಎಸ್ಎಆರ್ಐ ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಕೊರೊನಾ ಸೋಂಕಿತರಿರುವ ಜಾಲಿನಗರದ ಎಲ್ಲಾ ಮನೆಗಳಲ್ಲಿ ತಪಾಸಣೆ ಮಾಡಲಾಗಿದೆ. ಈ ಪೈಕಿ 39 ಐಎಲ್ಐ ಕೇಸ್‌ಗಳು ಜಾಲಿನಗರದಲ್ಲಿ ಪತ್ತೆಯಾಗಿದ್ದರೆ, ಬಾಷಾ ನಗರದಲ್ಲಿ 33 ಐಎಲ್ಐ ಕೇಸ್‌ಗಳು ಇರುವುದು ಆತಂಕ ಹುಟ್ಟಿಸಿದೆ. ಇಂದು ಕೊರೊನಾ ದೃಢಪಟ್ಟ ಮೂರು ಪ್ರಕರಣಗಳಲ್ಲಿ ಇದ್ದ ಗುಣಲಕ್ಷಣಗಳು ಐಎಲ್ಐ ನ 72 ಪ್ರಕರಣಗಳಲ್ಲಿ ಕಂಡು ಬಂದಿರುವುದೇ ಇದಕ್ಕೆ ಕಾರಣ.
ಎಲ್ಲರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. 8 ಕಂಟೈನ್ಮೆಂಟ್ ಜೋನ್ ಮಾಡಲಾಗಿದ್ದು, ಈ ಪೈಕಿ ಎರಡರಲ್ಲಿ ಸಡಿಲಿಕೆ ಮಾಡಲಾಗಿದೆ. 6 ಕಂಟೈನ್ಮೆಂಟ್ ಜೋನ್ ಸಕ್ರಿಯವಾಗಿವೆ. 298 ಸ್ಯಾಂಪಲ್ ಗಳ ವರದಿ ಬರಬೇಕಿದೆ. 309 ಮಂದಿ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ತಿಳಿಸಿದ್ದಾರೆ.
ಇಂದು ಮೂರು ಹೊಸ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಕಂಟೈನ್ಮೆಂಟ್ ಜೋನ್ ನಲ್ಲಿದ್ದವರಿಗೆ ಸೋಂಕು ತಗುಲಿದೆ ಬೇರೆ ಕಡೆಗಳಲ್ಲಿ ಹಬ್ಬಿಲ್ಲ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಕಂಟೈನ್ಮೆಂಟ್ ಝೋನ್ ನಲ್ಲಿ ಮನೆ-ಮನೆಗೆ ಭೇಟಿ ತಪಾಸಣಾ ಕಾರ್ಯ ಚುರುಕುಗೊಳಿಸಲಾಗಿದ್ದು, ತಪಾಸಣಾ ಕಾರ್ಯಕ್ಕೆ 20 ಮೆಡಿಕಲ್ ಅಧಿಕಾರಿಗಳ ನೇಮಕ ಹಾಗೂ 20 ತಂಡಗಳ ರಚನೆ ಮಾಡಲಾಗಿದೆ. ಜೊತೆಗೆ ಜ್ವರ, ನೆಗಡಿ, ಉಸಿರಾಟದ ತೊಂದರೆ ಇದ್ದರೆ ತಿಳಿಸಬೇಕು ಎಂದು ಸೂಚಿಸಲಾಗಿದೆ.