ದಾವಣಗೆರೆ : ರಾಜ್ಯದಲ್ಲಿ ರೈತರಿಗೆ ಭೀಕರ ಬರ ಎದುರಾಗಿದೆ. ಇದರಿಂದ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೆಕ್ಕೆಜೋಳದ ಕಣಜ ದಾವಣಗೆರೆ ಜಿಲ್ಲೆಯಲ್ಲಿ ಮಳೆ ಇಲ್ಲದೆ ಬೆಳೆ ಕೈಗೆ ಸಿಗದೆ ಅನ್ನದಾತರು ಕಂಗಾಲಾಗಿದ್ದಾರೆ.
ಸಾಲಸೋಲ ಮಾಡಿ ಅಲ್ಪಸ್ವಲ್ಪ ಮೆಕ್ಕೆಜೋಳ ಬೆಳೆದ ಕೆಲ ರೈತರು ಇದೀಗ ಕಣ್ಣೀರಿನಲ್ಲಿ ಕೈತೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಕಳೆದ ಎರಡು ದಿನಗಳ ಹಿಂದೆ ಅಕಾಲಿಕವಾಗಿ ಸುರಿದ ಮಳೆ. ಇದರಿಂದ ಬೆಳೆದ ಬೆಳೆ ಕೂಡ ನಾಶವಾಗುವ ಹಂತಕ್ಕೆ ತಲುಪಿದ್ದು, ಬೆಲೆ ಕೂಡ ಪಾತಾಳಕ್ಕೆ ಕುಸಿದಿದೆ. ಇದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ದಾವಣಗೆರೆ ಜಿಲ್ಲೆಯ ರೈತರು ಪ್ರಮುಖವಾಗಿ ಬೆಳೆಯುವ ಬೆಳೆ ಮೆಕ್ಕೆಜೋಳ. ಇಲ್ಲಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಈ ಬೆಳೆಯನ್ನು ಬೆಳೆಯುತ್ತಾರೆ. ಹೀಗಾಗಿ, ಜಿಲ್ಲೆಯ ಮೆಕ್ಕೆಜೋಳದ ಕಣಜ ಎಂದೇ ಹೆಸರುವಾಸಿಯಾಗಿದೆ. ಬೇರೆ ಬೇರೆ ದೇಶಗಳಿಗೂ ಕೂಡ ಇಲ್ಲಿನ ಮೆಕ್ಕೆಜೋಳ ರಫ್ತಾಗುತ್ತದೆ. ಆದರೆ ಈ ಬಾರಿ ಮೆಕ್ಕೆಜೋಳ ಬೆಳೆದ ರೈತರ ಸಂಕಷ್ಟ ಹೇಳತೀರದಂತಾಗಿದೆ.
ಸರಿಯಾದ ಸಮಯಕ್ಕೆ ಮಳೆ ಬಾರದಿದ್ದರಿಂದ ಜಿಲ್ಲೆಯಲ್ಲಿ ಕೇವಲ 10% ರಷ್ಟು ಮಾತ್ರ ಮೆಕ್ಕೆಜೋಳದ ಇಳುವರಿ ಬಂದಿದೆ. 90% ರಷ್ಟು ಬೆಳೆ ನೆಲಕಚ್ಚಿದೆ. ಈ ಹಿಂದೆ ಎಕರೆಗೆ 20 ಕ್ವಿಂಟಾಲ್ ಮೆಕ್ಕೆಜೋಳ ಬೆಳೆಯುತ್ತಿದ್ದ ರೈತರಿಗೆ ಮಳೆ ಕೈಕೊಟ್ಟ ಪರಿಣಾಮ ಈ ಬಾರಿ ಕೇವಲ 5 ರಿಂದ 6 ಕ್ವಿಂಟಾಲ್ ಬೆಳೆ ಮಾತ್ರ ಕೈಸೇರಿದೆ. ಇನ್ನು ಮುಸುಕಿನ ಜೋಳವನ್ನು ಕೆಲವರು ಕಟಾವು ಮಾಡದೆ ಹಾಗೆ ಜಮೀನಿನಲ್ಲಿ ಬಿಟ್ಟಿದ್ದು, ಏನಾದ್ರು ಕಟಾವು ಮಾಡಿದರೆ ಅದರ ಕೂಲಿ ಕೂಡ ಬರೋದಿಲ್ಲ ಎಂದು ಜಾನುವಾರುಗಳನ್ನು ಬಿಟ್ಟು ಮೇಯಿಸುತ್ತಿದ್ದಾರೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂಥಲ್ ಅವರು, "2023ರಲ್ಲಿ 2 ಲಕ್ಷದ 29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆಯಾಗಿದೆ. ಅದರಲ್ಲಿ 54 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ. ಉಳಿದ 1 ಲಕ್ಷದ 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಮಳೆಯಾಶ್ರಿತ ಬೆಳೆಗಳನ್ನು ಬೆಳೆದಿದ್ದಾರೆ. ಅದರಲ್ಲೂ ಮುಖ್ಯವಾಗಿ ಜಿಲ್ಲೆಯ ಮುಖ್ಯಬೆಳೆ ಮುಸುಕಿನ ಜೋಳವನ್ನು 1 ಲಕ್ಷದ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದಾರೆ. ಆಗಸ್ಟ್ ತಿಂಗಳಲ್ಲಿ ಶೇ.75 ರಷ್ಟು ಮಳೆ ಕೊರತೆಯಾಗಿದ್ದರಿಂದ ಬೆಳೆಯಲ್ಲಿ ನಿರೀಕ್ಷೆಯಷ್ಟು ಇಳುವರಿ ಪಡೆಯಲು ಆಗಲಿಲ್ಲ. ಇದರಿಂದ ಜಿಲ್ಲೆಯನ್ನು ಸರ್ಕಾರ ಬರಪೀಡಿತ ಎಂದು ಘೋಷಣೆ ಮಾಡಿದೆ. ಒಂದೂವರೆ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, 90% ರಷ್ಟು ಬೆಳೆ ಹಾಳಾಗಿವೆ. ಕಳೆದ ಬಾರಿ ಮುಸುಕಿನಜೋಳವನ್ನು 1 ಲಕ್ಷ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದರು. ಅತ್ಯುತ್ತಮ ಬೆಳೆ ಫಸಲು ಸಿಕ್ಕಿತ್ತು. ಈ ಬಾರಿ 75 ಶೇ% ಮಳೆ ಕೊರತೆಯಾಗಿದ್ದರಿಂದ ಬೆಳೆ ರೈತರ ಕೈ ಸೇರಿಲ್ಲ'' ಎಂದು ಮಾಹಿತಿ ನೀಡಿದ್ದಾರೆ.
ಮೆಕ್ಕೆಜೋಳ ಬೆಳೆದ ರೈತರ ಗೋಳು ಕೇಳುವವರು ಯಾರು?: ಈ ವೇಳೆ ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದ ರೈತ ಮಂಜುನಾಥ್ ಮಾತನಾಡಿ, "ಮೊದಲು ಮೆಕ್ಕೆಜೋಳ ಬೆಳೆ ಎಕರೆಗೆ 20 ಕ್ವಿಂಟಾಲ್ ಬರುತ್ತಿತ್ತು. ಇದೀಗ ಮಳೆ ಇಲ್ಲದ ಕಾರಣ ಐದಾರು ಕ್ವಿಂಟಾಲ್ ಬರುವುದೇ ಹೆಚ್ಚು. ಇದೀಗ ಏಕಾಏಕಿ ಮಳೆ ಬರುತ್ತಿರುವುದರಿಂದ ಜೋಳವನ್ನು ಈ ಮಳೆಯಿಂದಾಗಿ ಉಳಿಸಿಕೊಳ್ಳಲು ಹರಸಾಹಸಪಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ರಾತ್ರಿ ಮಳೆ ಸುರಿಯುವುದರಿಂದ ಸಮಸ್ಯೆ ಆಗಿದೆ. ಕ್ವಿಂಟಾಲ್ ಮೆಕ್ಕೆಜೋಳಕ್ಕೆ ಮೊದಲು ಹೆಚ್ಚು ಬೆಂಬಲ ಬೆಲೆ ಸಿಗುತ್ತಿತ್ತು. ಇದೀಗ ಅದು ಕೂಡಾ ಬಿದ್ದು ಹೋಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಒಂದು ಕ್ವಿಂಟಾಲ್ ಮೆಕ್ಕೆಜೋಳಕ್ಕೆ 2500 ಇತ್ತು. ಇದೀಗ 2200 ರೂಪಾಯಿ ಸಿಗುತ್ತಿದೆ ಎಂದು ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ.
ಇದನ್ನೂ ಓದಿ : ಚಿಕ್ಕೋಡಿ: ಮಳೆರಾಯನ ಕೋಪಕ್ಕೆ ನಲುಗಿದ ಅನ್ನದಾತ