ದಾವಣಗೆರೆ: ಆನ್ಲೈನ್ನಲ್ಲಿ ಜನಸಾಮಾನ್ಯರಿಗೆ ವಂಚಿಸಿದ್ದ ಸೈಬರ್ ವಂಚಕರು ಪೊಲೀಸರಿಗೂ ವಂಚಿಸಿರುವ ಘಟನೆ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಸೈಬರ್ ವಂಚನೆಯಿಂದ 82,998 ರೂಪಾಯಿ ಕಳೆದುಕೊಂಡಿದ್ದಾರೆ. ದಾವಣಗೆರೆ ನಗರದ ಪಿಜೆ ಬಡಾವಣೆಯ ಪೊಲೀಸ್ ಕಾನ್‌ಸ್ಟೆಬಲ್ ಬಸವರಾಜ ಬಾಗೇವಾಡಿ ಆನ್ಲೈನ್ ಮೋಸ ಹೋಗಿದ್ದಾರೆ.
ಪೊಲೀಸ್ ಕಾನ್‌ಸ್ಟೆಬಲ್ ಬಸವರಾಜ್ ಡಿಟಿಎಚ್ ರಿಜಾರ್ಚ್ ಮಾಡಿಸುವ ಉದ್ದೇಶದಿಂದ ಒಳ್ಳೆಯ ಪ್ಲಾನ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹುಡುಕುತ್ತಿದ್ದಾಗ ಟಾಟಪ್ಲೇ ಎಂಬ ಡಿಟಿಎಚ್‌ನ ಮೊಬೈಲ್ ಸಂಖ್ಯೆ ಸಿಕ್ಕಿದೆ. ಆ ಸಂಖ್ಯೆಗೆ ಕರೆ ಮಾಡಿದಾಗ ಅಪರಿಚಿತ ವ್ಯಕ್ತಿಯೊಬ್ಬ ಉತ್ತಮ ಯೋಜನೆ ಇದೆ ಎಂದು ನಂಬಿಸಿ ಲಿಂಕ್ ಓಪನ್ ಮಾಡಿ, ಅದರಲ್ಲಿ ಮಾಹಿತಿ ತುಂಬುವಂತೆ ತಿಳಿಸಿದ್ದಾನೆ.
ಅಪರಿಚಿತ ವ್ಯಕ್ತಿಯ ಮಾತುಗಳಿಗೆ ಮರುಳಾದ ಬಸವರಾಜ್ ಹೇಳಿದಂತೆ ಮಾಹಿತಿ ತುಂಬಿದ್ದಾರೆ. ಈ ವೇಳೆ ಅವರ ಖಾತೆಯಿಂದ ಹಂತಹಂತವಾಗಿ ಒಟ್ಟು ಹಣ ಕಡಿತವಾಗಿದೆ. ತಕ್ಷಣ ಬಸವರಾಜ್ ಈ ಬಗ್ಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.
ಮಹಿಳೆಯರೇ ಟಾರ್ಗೆಟ್, ಪರ್ಸ್ ಎಗರಿಸುವ ಕಳ್ಳರು: ದಾವಣಗೆರೆಯ ವಿದ್ಯಾನಗರದಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯೊಬ್ಬರ ಕೈಯಲ್ಲಿದ್ದ ಪರ್ಸ್ ಖದೀಮನೋರ್ವ ಎಗರಿಸಿರುವ ಘಟನೆ ನಡೆದಿದೆ. ರಾಮನಗರದ ನಿವಾಸಿ ಅನಿತಾ ಫಾಲಾಕ್ಷಿ ಪರ್ಸ್ ಸಮೇತ ಹಣ ಕಳೆದುಕೊಂಡ ಮಹಿಳೆ. ಇನ್ನು ಕಳ್ಳತನವಾದ ಪರ್ಸ್ನಲ್ಲಿ 2,000 ಹಾಗೂ ಮೊಬೈಲ್ ಇತ್ತು. ಅನಿತಾ ಅವರು ಸೊಪ್ಪು ಮಾರಾಟ ಮಾಡುತ್ತಿದ್ದ ವೇಳೆ ಹಿಂಬದಿಯಿಂದ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಕಳ್ಳನೊಬ್ಬ ಕೈಯಲ್ಲಿದ್ದ ಪರ್ಸ್ ಎಗರಿಸಿದ್ದಾನೆ.
ಇದನ್ನೂ ಓದಿ: ಖಾತೆ ಫ್ರೀಜ್ ಮಾಡಿ ಸೈಬರ್ ವಂಚಕರಿಂದ 3.70 ಕೋಟಿ ಹಣ ಹಿಂಪಡೆದ ಮುಂಬೈ ಪೊಲೀಸರು