ದಾವಣಗೆರೆ: ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಗೆ ಲಾಕ್ಡೌನ್ ಪರಿಹಾರವಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅಭಿಪ್ರಾಯಪಟ್ಟಿದ್ದಾರೆ.
ಹೊನ್ನಾಳಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಲಾಕ್ಡೌನ್ ಮಾಡುವುದರಿಂದ ಆದಾಯ ನಷ್ಟವಾಗಲಿದೆ. ಜನರ ಆರೋಗ್ಯವೂ ಮುಖ್ಯ. ಜೊತೆಗೆ ಸರ್ಕಾರ ನಡೆಸಿಕೊಂಡು ಹೋಗಬೇಕು. ಎಲ್ಲ ಕೊರೊನಾ ಸೋಂಕಿತರನ್ನು ವಾಸಿ ಮಾಡಲು ಹಾಗೂ ಕೊರೊನಾ ನಿಯಂತ್ರಿಸಲು ಸರ್ಕಾರವೊಂದರಿಂದಲೇ ಆಗದು. ಜನರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪ್ರತಿಯೊಬ್ಬರು ಆತ್ಮಸ್ಥೈರ್ಯ ಬೆಳೆಸಿಕೊಂಡರೆ ಸಾವನ್ನೇ ಗೆಲ್ಲಬಹುದು. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಉಪಯೋಗಿಸಿ. ಬೇಕಾಬಿಟ್ಟಿಯಾಗಿ ಯಾರೂ ಓಡಾಡಬಾರದು. ಪೊಲೀಸರು ಸಹ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅನವಶ್ಯಕವಾಗಿ ಸಂಚರಿಸುವವರನ್ನು ಮನೆಗೆ ಹೋಗಿ ಎಂಬ ಪರಿಸ್ಥಿತಿ ಬಂದಿದೆ ಎಂದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಹ ಕೊರೊನಾ ನಿಯಂತ್ರಣ ಸಂಬಂಧ ಹಗಲಿರುಳು ಶ್ರಮಿಸುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಲಾಕ್ಡೌನ್ ಜಾರಿಗೊಳಿಸಬೇಕೋ ಅಥವಾ ಬೇಡವೇ ಎಂಬುದನ್ನು ಸಿಎಂ ನಿರ್ಧರಿಸಲಿದ್ದಾರೆ. ಈ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದರು.
ಕೊರೊನಾ ಸೋಂಕಿತರನ್ನು ಕೀಳಾಗಿ ಕಾಣುವುದು, ಅವಮಾನಿಸುವುದು ಸರಿಯಲ್ಲ. ಅವರಿಗೆ ಆಕಸ್ಮಿಕವಾಗಿ ವೈರಸ್ ತಗುಲಿರುತ್ತದೆ. ಸೋಂಕಿತರು ಯಾರೇ ಇದ್ದರೂ ಅಗತ್ಯ ಮಾಹಿತಿಯನ್ನು ನೀಡಿ. ಮರೆಮಾಚಿ ಓಡಾಡಬೇಡಿ. ಇದರಿಂದ ವೈರಸ್ ಹೆಚ್ಚಾಗಿ ಹರಡುತ್ತದೆ ಎಂದು ಹೇಳಿದರು.