ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಎಲ್ಲಾ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರಗಳಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭವಾಗಿವೆ. ಉಳಿದವರಿಗೆ ಆನ್‍ಲೈನ್‍ನಲ್ಲಿ ಮಾತ್ರ ತರಗತಿ ನಡೆಸಲು ಸೂಚಿಸಲಾಗಿದೆ ಎಂದು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ತಿಳಿಸಿದ್ದಾರೆ.
ಸರ್ಕಾರ ಮತ್ತು ಯುಜಿಸಿ ಸೂಚನೆಯಂತೆ ಅಂತಿಮ ವರ್ಷದ ಅಂದರೆ ಸ್ನಾತಕ ಪದವಿಯ 5ನೇ ಹಾಗೂ ಸ್ನಾತಕೋತ್ತರ ಪದವಿಯ 3ನೇ ಸೆಮಿಸ್ಟರ್ಗೆ ಮಾತ್ರ ಭೌತಿಕ ಹಾಗೂ ಆನ್‍ಲೈನ್ ತರಗತಿ ನಡೆಸಲಾಗುವುದು. ಯಾವ ಮಾಧ್ಯಮದಲ್ಲಿ ಪಾಠ ಕೇಳಬೇಕೆಂಬುದನ್ನು ವಿದ್ಯಾರ್ಥಿಗಳೇ ನಿರ್ಧರಿಸಬೇಕು ಎಂದು ಹೇಳಿದ್ದಾರೆ.
ತರಗತಿಗಳಿಗೆ ಭೌತಿಕವಾಗಿ ಹಾಜರಾಗಲು ಬಯಸುವ ವಿದ್ಯಾರ್ಥಿಗಳು ಕೋವಿಡ್-19 ಪರೀಕ್ಷೆ ವೈದ್ಯಕೀಯ ಪ್ರಮಾಣ ಪತ್ರ, ಪಾಲಕರ ಅನುಮತಿ ಮತ್ತು ವೈಯಕ್ತಿಕ ನಡವಳಿಕೆ ಪತ್ರವನ್ನು ವಿಭಾಗಕ್ಕೆ ಸಲ್ಲಿಸುವುದು ಕಡ್ಡಾಯ. ಪ್ರಮಾಣ ಪತ್ರ ನೀಡದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದಿಲ್ಲ. ಅಲ್ಲದೇ ಪ್ರಾಧ್ಯಾಪಕರೂ ವೈದ್ಯಕೀಯ ತಪಾಸಣಾ ಪತ್ರ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.
ಸ್ನಾತಕೋತ್ತರ ಪದವಿಯ ಪ್ರಥಮ ಸೆಮಿಸ್ಟರ್ ಹಾಗೂ ಸ್ನಾತಕ ಪದವಿಯ ಪ್ರಥಮ ಮತ್ತು ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆನ್‍ಲೈನ್‍ನಲ್ಲಿ ಮಾತ್ರ ಪಾಠ ಪ್ರವಚನ ಮುಂದುವರಿಸಲು ಸೂಚಿಸಲಾಗಿದೆ. ಆದಾಗ್ಯೂ ವಿದ್ಯಾರ್ಥಿಗಳು ತಮಗೆ ಬೇಕಾದ ಮಾಹಿತಿ ಅಥವಾ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂಚಿತವಾಗಿ ಅನುಮತಿ ಪಡೆದು, ವಾರದಲ್ಲಿ ಒಮ್ಮೆ ಮಾತ್ರ ಕಾಲೇಜಿಗೆ ಭೌತಿಕವಾಗಿ ಹೋಗಿ ಬರಲು ಅನುಮತಿ ನೀಡಲಾಗುವುದು. ಇದಕ್ಕೂ ಸಹ ಪಾಲಕರ ಒಪ್ಪಿಗೆ ಪತ್ರ ಸಲ್ಲಿಸಲೇಬೇಕು ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಯ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಶೈಕ್ಷಣಿಕ ಅಧ್ಯಯನಕ್ಕೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಒದಗಿಸಲು ಸೂಚಿಸಲಾಗಿದೆ. ಆನ್‍ಲೈನ್ ತರಗತಿಗಳ ಜೊತೆಗೆ ವಿಡಿಯೋ, ಆಡಿಯೋ, ಆಡಿಯೋ ವಿಷುವಲ್, ಮಲ್ಟಿಮೀಡಿಯಾ, ಯೂಟ್ಯೂಬ್ ಸೇರಿದಂತೆ ವಿವಿಧ ಮಾಧ್ಯಮಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳ ಅಧ್ಯಯನ ಪೂರಕ ಮಾಹಿತಿ ಒದಗಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.