ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಹಾಲಿವಾಣ ಗ್ರಾಮದ ಗಣೇಶ್ ಉತ್ತಮ ಪ್ರಜಾಕೀಯ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಹುಬ್ಬಳ್ಳಿಯಲ್ಲಿ ಖಾಸಗಿ ಸಂಸ್ಥೆಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಇತ, ಇದೀಗ ಲೋಕಸಭಾ ಚುನಾವಣಾ ಕಣಕ್ಕಿಳಿದಿದ್ದಾರೆ. ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡು ಚುನಾವಣೆಗೆ ಇಳಿದಿರುವ ಈತನ ಬಳಿ ಇರೋದು ಕೇವಲ 31 ಸಾವಿರ ರೂ ಮಾತ್ರ.
2ನೇ ಹಂತದಲ್ಲಿ ಮತದಾನ ನಡೆಯುವ ದಾವಣಗೆರೆ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಮೊದಲ ಅಭ್ಯರ್ಥಿಯಾಗಿ ನಟ ಉಪೇಂದ್ರ ನಾಯಕತ್ವದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಗಣೇಶ್ ನಾಮಪತ್ರ ಸಲ್ಲಿಸಿದ್ದಾರೆ.
ತಮ್ಮ ಬಳಿ ಕೇವಲ 31 ಸಾವಿರ ರೂ ಹಾಗೂ ಪತ್ನಿಯ ಬಳಿ ಒಂದುವರೆ ಲಕ್ಷ ಹಣ ಬಿಟ್ಟರೆ ಬೇರೆ ಯಾವೂದೇ ಆಸ್ತಿ ಇಲ್ಲ. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಪ್ರಜಾಕೀಯ ಪಕ್ಷ ಸ್ಥಾಪಿಸಲ್ಪಟ್ಟಿದೆ. ಉಪೇಂದ್ರ ಅವರ ನಾಯಕತ್ವದಲ್ಲಿ ಜನರಿಗೆ ಅನುಕೂಲವಾಗುವ ಸಾಕಷ್ಟು ಯೋಜನೆ ರೂಪಿಸಿದೆ. ನಾನು ಗೆದ್ದು ಬಂದರೆ ಪ್ರಜಾ ಸೇವಕನಾಗಿ ಕೆಲಸ ಮಾಡುತ್ತೇನೆ. ಪ್ರತಿ ಹಳ್ಳಿಗೂ ಹೋಗಿ ಸಮಸ್ಯೆ ತಿಳಿದುಕೊಳ್ಳುತ್ತೇನೆ. ಸಂಸತ್ನಲ್ಲಿ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುತ್ತೇನೆಂದು ಗಣೇಶ್ ತಿಳಿಸಿದ್ದಾರೆ.
ದಾವಣಗೆರೆ ಲೋಕಸಭಾ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಗಣೇಶ್ ಅವರಿಗೆ ಪ್ರಜಾಕೀಯ ಪಕ್ಷದ ಸ್ಥಾಪಕ ಉಪೇಂದ್ರ ಅವರ ಸಹೋದರ ಸುದೀಂದ್ರ ಸಾಥ್ ನೀಡಿದರು. ಈಗಾಗಲೇ ಬಿಜೆಪಿ ಅಭ್ಯರ್ಥಿ ಜಿಎಂ ಸಿದ್ದೇಶ್ವರ್ ಹಳ್ಳಿಗಳಿಗೆ ತೆರಳಿ ಒಂದು ಸುತ್ತಿನ ಪ್ರಚಾರ ಶುರು ಮಾಡಿದ್ದಾರೆ. ಇತ್ತ ಕಾಂಗ್ರೆಸ್ ಮಾತ್ರ ಇನ್ನೂ ಗೊಂದಲದಲ್ಲಿದೆ.