ದಾವಣಗೆರೆ: ಚೀನಾದ ಗಡಿಯಲ್ಲಿ ಸುಮಾರು 9 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಯೋಧ ಬಸಪ್ಪ ಅವರು "ಈಟಿವಿ ಭಾರತ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
"ಆಗ ನಾವೆಲ್ಲಾ ಅಣ್ಣ ತಮ್ಮಂದಿರ ರೀತಿ ಇದ್ದೆವು. ಒಂದೇ ಒಂದು ಫೈರಿಂಗ್ ಆಗಿರಲಿಲ್ಲ. ಚಳಿ, ಗಾಳಿ, ಮಳೆ ಬಿಟ್ಟರೆ ಯಾವ ತೊಂದರೆಯೂ ಆಗಿಲ್ಲ. ಉಭಯ ದೇಶಗಳ ಸೈನಿಕರ ನಡುವೆ ಉತ್ತಮ ಬಾಂಧವ್ಯ ಇತ್ತು. ರಾತ್ರಿ ವೇಳೆ ಗಸ್ತು ತಿರುಗುವಾಗ, ಪೆಟ್ರೋಲಿಂಗ್ ಮಾಡುವಾಗ 20 ಅಡಿ ದೂರ ಇರುತ್ತಿದ್ದೆವು. ನಮ್ಮ ತಂಟೆಗೆ ಅವ್ರು ಬರುತ್ತಿರಲಿಲ್ಲ, ನಾವು ಹೋಗುತ್ತಿರಲಿಲ್ಲ. ಈಗ ಗಲಾಟೆ ನಡೆದ ಪ್ರದೇಶದಲ್ಲಿ ಮೂರು ತಿಂಗಳು ಸೇವೆ ಸಲ್ಲಿಸಿದ್ದೆ. ಏನೂ ಸಮಸ್ಯೆ ಆಗಿರಲಿಲ್ಲ. ಸದ್ಯ ಘರ್ಷಣೆ ಉಂಟಾಗಿರುವುದು ಬೇಸರ ತಂದಿದೆ' ಎಂದು ನಿವೃತ್ತ ಯೋಧ ಬಸಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಸೇನೆಯಲ್ಲಿ ಸುಮಾರು 28 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೆ. ಇದರಲ್ಲಿ ಎರಡು ದಶಕ ಕೇವಲ ಗಡಿ ಕಾಯುವ ಕಾಯಕದಲ್ಲಿ ನಿರತನಾಗಿದ್ದೆ. ಭಾರತ - ಚೀನಾ ಸೈನಿಕರ ನಡುವೆ ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆ ಜಾಗದಲ್ಲಿಯೇ ಮೂರು ತಿಂಗಳು ಕೆಲಸ ನಿರ್ವಹಿಸಿದ್ದೆ. ದೊಡ್ಡ ಗುಡ್ಡಗಾಡು ಪ್ರದೇಶ ಅದು. ನಮ್ಮ ಸೈನಿಕರು ಚೀನಾ ಸೈನಿಕರ ನಡುವಿನ ಅಂತರ ತುಂಬಾ ದೂರ ಇರಲಿಲ್ಲ. ಇಂತಹ ಘಟನೆ ಯಾವಾಗಲೂ ಆಗಿರಲಿಲ್ಲ. ಈಗ ಯಾಕೆ ಚೀನಾಕ್ಕೆ ಕೆಟ್ಟ ಬುದ್ಧಿ ಬಂತು ಅನ್ನೋದು ಗೊತ್ತಾಗುತ್ತಿಲ್ಲ ಎನ್ನುತ್ತಾರೆ ಬಸಪ್ಪ.
ಹಿಮಾಚಲ ಪ್ರದೇಶ, ಸಿಕ್ಕೀಂ, ಬರ್ಮಾ, ಭೂತಾನ್ ಗಡಿ ಪ್ರದೇಶಗಳಲ್ಲಿ 9 ವರ್ಷ ಇದ್ದೆ. ಕಷ್ಟ, ಸುಖ ಎರಡನ್ನೂ ಅನುಭವಿಸಿದ್ದೇನೆ. ಶ್ರೀಲಂಕಾ ಬಾರ್ಡರ್ನಲ್ಲಿ ಒಂದೂವರೆ ವರ್ಷ ಕೆಲಸ ಮಾಡಿದ್ದೇನೆ. ಕಾರ್ಗಿಲ್ ಯುದ್ಧದಲ್ಲಿ ಒಂದು ತಿಂಗಳ ಕಾಲ ಪಾಲ್ಗೊಂಡಿದ್ದೆ. ಸಹೋದರರಂತೆ ಇದ್ದ ಚೀನಾ ಹಾಗೂ ಭಾರತ ಯೋಧರ ನಡುವಿನ ಗಲಾಟೆಯು ಮನಸ್ಸಿಗೆ ಬೇಸರ ತಂದಿದೆ. 1962 ರಲ್ಲಿ ಭಾರತದೊಂದಿಗೆ ಚೀನಾ ಯುದ್ಧ ಮಾಡಿ ಗೆದ್ದಿತ್ತು. ಆಗ ಉಭಯ ದೇಶಗಳ ಕಡೆಯೂ ಸಾವು-ನೋವು ಸಂಭವಿಸಿತ್ತು. ನಮ್ಮ ಬಳಿ ಶಸ್ತಾಸ್ತ್ರ ಇದ್ದದ್ದು ಕಡಿಮೆ. ಈಗ ಭಾರತ ಬಲಿಷ್ಠವಾಗಿದೆ. ಯುದ್ಧ ಮಾಡಿದರೆ ಭಾರತಕ್ಕೇನೂ ತೊಂದರೆ ಇಲ್ಲ. ಕೊರೊನಾ ನಡುವೆ ಸಂಕಷ್ಟಕ್ಕೆ ಒಳಗಾಗಿರುವ ಈ ವೇಳೆಯಲ್ಲಿ ಯುದ್ಧ ಮಾಡಿದರೆ ಎರಡೂ ದೇಶಗಳಿಗೆ ತೊಂದರೆ ಎಂದು ನಿವೃತ್ತ ಯೋಧ ಬಸಪ್ಪ ಅಭಿಪ್ರಾಯಪಟ್ಟಿದ್ದಾರೆ.