ದಾವಣಗೆರೆ : ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವೇರುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಗೆ ಠಕ್ಕರ್ ಕೊಡಲು ಹಾಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸಾವಿರಾರು ಜನರನ್ನು ಸೇರಿಸಿ ಸ್ವಾಭಿಮಾನಿ ಸಭೆ ನಡೆಸುವ ಮೂಲಕ ನಿರ್ಧಾರ ತಿಳಿಸಿದರು.
ಮಾಡಳ್ ಮಲ್ಲಿಕಾರ್ಜುನ್ ಮಾತನಾಡಿ, ಕಾರ್ಯಕರ್ತರು ಮತ್ತು ಮುಖಂಡರು ನನ್ನನ್ನು ಆಶೀರ್ವದಿಸಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಸಲಹೆ, ಅಭಿಪ್ರಾಯ ತಿಳಿಸಿದ್ದಾರೆ. ಐದು ವರ್ಷ ಮನೆಯಲ್ಲಿದ್ದು ಸಮಾಜ ಸೇವೆ ಮಾಡುತ್ತಾ ಕಾಲ ಕಳೆಯೋಣ, ಸಾರ್ವಜನಿಕ ಬದುಕು ಬೇಡ ಎಂದುಕೊಂಡಿದ್ದೆ. ಆದರೆ ಜನರ ಒತ್ತಾಯದಿಂದ ಒಂದು ಹೆಜ್ಜೆ ಮುಂದಿಟ್ಟಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದೇನೆ. ಯಾವುದೇ ವೈಯಕ್ತಿಕ ನಿರ್ಣಯಗಳನ್ನು ತೆಗೆದುಕೊಳ್ಳುವ ಬದಲು ಕಾರ್ಯಕರ್ತರ ಬಳಿ ಚರ್ಚಿಸಿಯೇ ತಾಲೂಕಿಗೆ ಒಳ್ಳೆಯದಾಗುವ ದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಎಂದರು.
ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಭ್ರಷ್ಟಾಚಾರ ಪ್ರಕರಣ ಇಡೀ ರಾಜ್ಯದಲ್ಲಿ ಸದ್ದು ಮಾಡಿತ್ತು. ಪ್ರಕರಣದಿಂದ ಬಿಜೆಪಿಗೆ ಸಾಕಷ್ಟು ಇರಿಸುಮುರಿಸು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಚನ್ನಗಿರಿ ಆಕಾಂಕ್ಷಿಯಾಗಿದ್ದ ಶಾಸಕರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ಗೆ ಟಿಕೆಟ್ ಕೈತಪ್ಪಿತ್ತು. ಬಿಜೆಪಿ ಅಭ್ಯರ್ಥಿ ಹೆಚ್.ಎಸ್.ಶಿವಕುಮಾರ್ ವಿರುದ್ಧ ಬಂಡಾಯದ ಬೆಂಕಿ ಹೊತ್ತಿಕೊಂಡಿತ್ತು. ಮಾಡಾಳ್ ವಿರೂಪಾಕ್ಷಪ್ಪನವರು ಜೈಲಿನಲ್ಲಿದ್ದು ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಮಾತ್ರ ಪಕ್ಷದ ವಿರುದ್ಧ ಮಾತನಾಡದೇ ಸೈಲೆಂಟ್ ಆಗಿ ಸಭೆ ಮಾಡಿ ದುಡುಕುವ ನಿರ್ಧಾರ ಮಾಡದೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಇನ್ನೆರಡು ದಿನಗಳ ಬಳಿಕ ನಿರ್ಧಾರ ತಿಳಿಸುವುದಾಗಿ ಹೇಳಿದ್ದರು.
ಇದನ್ನೂ ಓದಿ : ಬಿಜೆಪಿ ಮುಳುಗಿಸಿದ ಕೀರ್ತಿ ಯಡಿಯೂರಪ್ಪನವರಿಗೆ ಸಲ್ಲುತ್ತದೆ: ಲಕ್ಷ್ಮಣ್ ಸವದಿ
ಕಾಂಗ್ರೆಸ್ ಈ ನಾಲ್ವರು ಶಾಸಕರಿಗೆ ಟಿಕೆಟ್ ಇಲ್ಲ? ರಾಜೀನಾಮೆಗೆ ಮುಂದಾಗಿದ್ದಾರಾ ಅಖಂಡ?