ದಾವಣಗೆರೆ: ಮಾನವ ದಿನದಿಂದ ದಿನಕ್ಕೆ, ಕ್ಷಣದಿಂದ ಕ್ಷಣಕ್ಕೆ ತನ್ನ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಕಂಡುಕೊಳ್ಳಲು ಹಾತೊರೆತುತ್ತಿದ್ದಾನೆ. ಅದರಂತೆ ಪ್ರಸ್ತುತ ಅನೇಕ ಬೆಳವಣಿಗೆ ಸಹ ಆಗಿದೆ. ಆದ್ರೆ ಬದಲಾದ ಈ ಆಧುನಿಕ ಜೀವನ ಶೈಲಿ ಜೊತೆಗೆ ಸತ್ವವಿಲ್ಲದ ಆಹಾರ ಪದ್ಧತಿ ಒಂದಿಷ್ಟು ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತಿದೆ ಎನ್ನುವುದು ನಂಬಲೇಬೇಕಾದ ಕಹಿಸತ್ಯ.
ಹೌದು, ಹೆರಿಗೆ ನೋವು ತಾಳಲಾರದೆ ಗರ್ಭಿಣಿಯರು ಸಿಸೇರಿಯನ್ ಶಸ್ತ್ರ ಚಿಕಿತ್ಸೆಗೆ ಮೊರೆ ಹೋಗುತ್ತಿರುವುದನ್ನು ನಾವು ಗಮನಿಸಲೇಬೇಕಾದ ವಿಚಾರ. ಬೆಣ್ಣೆನಗರಿ ದಾವಣಗೆರೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಹೆರಿಗೆಗನ್ನು ಹೆಚ್ಚಾಗಿ ಮಾಡಿಸುತ್ತಿದ್ದರೂ ಕೂಡ ಖಾಸಗಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಹೆರಿಗೆಗಳು ಹೆಚ್ಚಾಗಿವೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಸಿಸೇರಿಯನ್ ಹೆರಿಗೆ ಪ್ರಕರಣಗಳು:
ಡಬ್ಲ್ಯೂಹೆಚ್ಓ ನಿಯಮ ಪ್ರಕಾರ ಸಿಸೇರಿಯನ್ ಹೆರಿಗೆ ಪ್ರಕರಣಗಳು ಶೇ. 15 ಕ್ಕಿಂತ ಕಡಿಮೆ ಇರಬೇಕು. ಈ ನಿಯಮ ಇದ್ದರೂ ಕೂಡ ದಾವಣಗೆರೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ 23 % ರಷ್ಟು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಶೇ 37 % ರಷ್ಟು ಹೆರಿಗೆಗಳು ಸಿಸೇರಿಯನ್ ಶಸ್ತ್ರ ಚಿಕಿತ್ಸೆ ಮೂಲಕವೇ ನಡೆಯುತ್ತಿವೆ.
ಸಿಸೇರಿಯನ್ ಶಸ್ತ್ರ ಚಿಕಿತ್ಸೆಗೆ ಆದ್ಯತೆ:
ಹೆಚ್ಚು ಖಾಸಗಿ ಆಸ್ಪತ್ರೆಗಳಿಂದ ಕೂಡಿರುವ ದಾವಣಗೆರೆ ಜಿಲ್ಲೆಗೆ ಚಿತ್ರದುರ್ಗ, ಹಾವೇರಿ, ಬಳ್ಳಾರಿ, ಶಿವಮೊಗ್ಗ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಜನರು ಭೇಟಿ ನೀಡುತ್ತಾರೆ. ಹೆರಿಗೆಗಾಗಿ ಆಗಮಿಸುವವರಿಗೆ ಸರ್ಕಾರಿ ಹಾಗು ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಾಗಿ ಸಹಜ ಹೆರಿಗೆಗಳನ್ನು ಮಾಡಲಾಗುತ್ತಿದ್ದಾಗ್ಯೂ ಕೂಡ ಅಷ್ಟೇ ಪ್ರಮಾಣದಲ್ಲಿ ಸಿಸೇರಿಯನ್ ಹೆರಿಗೆ ಮಾಡಿಸಲಾಗುತ್ತಿದೆ.
ಸರ್ಕಾರಿ ಹಾಗು ಖಾಸಗಿ ಆಸ್ಪತ್ರೆಗಳಲ್ಲಿ ಆಗಿರುವ ಹೆರಿಗೆಗಳೆಷ್ಟು?
- ದಾವಣಗೆರೆ ಜಿಲ್ಲೆಯ 100 ಸರ್ಕಾರಿ ಆಸ್ಪತ್ರೆಗಳ ಪೈಕಿ 2020-21ರಲ್ಲಿ ಒಟ್ಟು 13,874 ಹಾಗು ಜನವರಿ ತಿಂಗಳಿನಲ್ಲಿ 1,689ರಷ್ಟು ಹೆರಿಗೆಳಾಗಿದ್ರೆ, ಇತ್ತ ಖಾಸಗಿ ಆಸ್ಪತ್ರೆಯಲ್ಲಿ ಒಟ್ಟು 4,140 ಹೆರಿಗೆಗಳು ಸೇರಿ ಒಟ್ಟು 18,020 ಹೆರಿಗೆಗಳಾಗಿವೆ. ಅವುಗಳ ಪೈಕಿ 3,347 ಸಿಸೇರಿಯನ್ ಡೆಲಿವರಿಗಳಾಗಿವೆ.
- ಖಾಸಗಿ ಆಸ್ಪತ್ರೆಗಳ ಅಂಕಿ ಅಂಶ ನೋಡುವುದಾದರೆ ಒಟ್ಟು 4,140 ಹೆರಿಗೆಗಳ ಪೈಕಿ 1,523 ಸಿಸೇರಿಯನ್ ಹೆರಿಗಳನ್ನು ಮಾಡಲಾಗಿದೆ. ಅಂದರೆ ಶೇ. 37 ರಷ್ಟು ಸಿಸೇರಿಯನ್ ಹೆರಿಗೆಗಳಾಗಿದ್ದು, ಇತ್ತ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ 23% ರಷ್ಟು ಸಿಸೇರಿಯನ್ ಪ್ರಕರಣಗಳು ವರದಿಯಾಗಿವೆ.
ಡಬ್ಲ್ಯೂಹೆಚ್ಓ ನಿಯಮಾನುಸಾರ ಶೇ.15ಕ್ಕಿಂತ ಹೆಚ್ಚು ಸಿಸೇರಿಯನ್ ಪ್ರಕರಣಗಳು ಇರಕೂಡದು ಎಂಬ ನಿಯಮ ಇದ್ದರೂ ಕೂಡ ಜಿಲ್ಲೆಯಲ್ಲಿ ಸಿಸೇರಿಯನ್ ಪ್ರಕರಣಗಳು ಹೆಚ್ಚಾಗಿರುವುದು ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಸುದ್ದಿಯನ್ನೂ ಓದಿ: ಸಿಸೇರಿಯನ್ ಶಸ್ತ್ರ ಚಿಕಿತ್ಸೆಗೆ ಮೊರೆ ಹೋಗುತ್ತಿರುವ ಗರ್ಭಿಣಿಯರು : ಕಾರಣ?
ಖಾಸಗಿ ಆಸ್ಪತ್ರೆಗಳು ಹಣಕ್ಕಾಗಿ ನಾರ್ಮಲ್ ಹೆರಿಗೆ ಮಾಡಿಸುವ ಬದಲು ಸಿಸೇರಿಯನ್ ಮಾಡಿಸುತ್ತಿವೆ ಎನ್ನಲಾಗುತ್ತಿದ್ದು ಅದನ್ನು ಸರ್ಕಾರ ಕೂಡಲೇ ಸರಿಪಡಿಸಬೇಕಾಗಿದೆ.