ದಾವಣಗೆರೆ: ಕೋವಿಡ್ -19 ಹೆಸರಿನಲ್ಲಿ ಧರ್ಮವೊಂದರ ವಿರುದ್ಧ ಸುಳ್ಳು ಮಾಹಿತಿ ನೀಡಿ ಪ್ರಚೋದನೆ ನೀಡಿದ ಆರೋಪದ ಮೇಲೆ ನಗರದ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ರೀತಿ ಸುಳ್ಳು ಮಾಹಿತಿ ನೀಡಿದಾತನನ್ನು ಶಿವಪ್ರಸಾದ್ ಕುರುಡಿಮಠ್ ಎಂದು ಗುರುತಿಸಲಾಗಿದೆ. "ಬಾಷಾ ನಗರ, ಆಜಾದ್ ನಗರ, ಭಗತ್ ಸಿಂಗ್ ನಗರ ಹಾಗೂ ವಿನೋಬನಗರ ಪ್ರದೇಶಗಳಲ್ಲಿ ಜಿಹಾದಿಗಳು ಹೆಚ್ಚಿದ್ದಾರೆ. ದಾವಣಗೆರೆ ಸ್ಮಶಾನವಾಗಲಿದೆ" ಎಂದು ಆತಂಕಗೊಳಿಸುವ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ.
ಈ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಕಲಂ 54ರ ಅನ್ವಯ ಪ್ರಕರಣ ದಾಖಲಿಸಿ ಆರೋಪಿಯನ್ನು ಕೋರ್ಗೆಟ್ಗೆ ಹಾಜರುಪಡಿಸಲಾಗಿದ್ದು, ಇನ್ನು ಮುಂದೆ ಇಂಥ ಅಪರಾಧ ಮಾಡುವುದಿಲ್ಲ ಎಂದು ಶಿವಪ್ರಸಾದ್ನಿಂದ 5 ಲಕ್ಷ ರೂಪಾಯಿ ಮೌಲ್ಯದ ಬಾಂಡ್ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ.
ಯಾರೂ ವಿನಾ ಕಾರಣ ಸುಳ್ಳು ಸುದ್ದಿ ಹರಡಬಾರದು. ಕೊರೊನಾ ಹೆಸರಿನಲ್ಲಿ ಈ ರೀತಿ ತಪ್ಪು ಮಾಹಿತಿ, ಕೊರೊನಾ ಪೀಡಿತರ ಬಗ್ಗೆ ಅವಹೇಳನ ಮಾಡುವುದು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಎಚ್ಚರಿಕೆ ನೀಡಿದ್ದಾರೆ.