ದಾವಣಗೆರೆ: ಮಾಯಕೊಂಡ ಪೊಲೀಸರ ವಶದಲ್ಲಿದ್ದಾಗ ಮರಳಸಿದ್ದಪ್ಪ ಎಂಬ ವ್ಯಕ್ತಿ ಅನುಮಾನಾಸ್ಪದವಾಗಿ ಸಾವು ಕಂಡ ಘಟನೆಗೆ ಸಂಬಂಧಿಸಿದಂತೆ ಸಿಐಡಿ ತನಿಖೆ ಚುರುಕುಗೊಳಿಸಿದೆ.
ಮಾಯಕೊಂಡ ಪೊಲೀಸ್ ಠಾಣೆಗೆ ಸಿಐಡಿ ಡಿವೈಎಸ್ಪಿ ಕೆ.ಸಿ. ಗಿರೀಶ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಪೊಲೀಸ್ ಠಾಣೆಯಲ್ಲಿದ್ದ ಸಿಸಿಟಿವಿ ಸೇರಿದಂತೆ ಸಾಕ್ಷ್ಯಗಳ ಪರಿಶೀಲನ ನಡೆಸಿದ ತಂಡ, ಠಾಣೆಯಿಂದ ನೂರು ಮೀಟರ್ ದೂರದಲ್ಲಿರುವ ಉಗ್ರಾಣ ನಿಗಮದ ಬಸ್ ನಿಲ್ದಾಣಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಮೃತದೇಹ ಪತ್ತೆಯಾಗಿದ್ದ ಸ್ಥಳ ವೀಕ್ಷಿಸಿದರು.
ಸಿಐಡಿ ತಂಡದಿಂದ ಕಸ್ಟೋಡಿಯಲ್ ಡೆತ್ ತನಿಖೆ ಅರಂಭಗೊಂಡಿದ್ದು, ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದರು. ಮಂಗಳವಾರದಂದು ವಿಟ್ಟಲಾಪುರದ ಮರಳಸಿದ್ದಪ್ಪರದ್ದು ಲಾಕಪ್ ಡೆತ್ ಎಂಬ ಶಂಕೆ ವ್ಯಕ್ತವಾಗಿತ್ತು. ಪ್ರಕರಣ ಸಂಬಂಧ ಮಾಯಕೊಂಡ ಪಿ ಎಸ್ ಐ ಸೇರಿ ನಾಲ್ವರು ಪೊಲೀಸ್ ಸಿಬ್ಬಂದಿಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ನಿನ್ನೆ ಮೃತ ಮರಳಸಿದ್ದಪ್ಪ ಪೋಸ್ಟ್ ಮಾರ್ಟಮ್ ವರಿದಿ ಬಂದ ನಂತರ ಕುಟುಂಬಕ್ಕೆ ಶವ ಹಸ್ತಾಂತರ ಮಾಡಲಾಗಿದ್ದು, ಅಂತ್ಯಸಂಸ್ಕಾರ ನೆರವೇರಿದೆ.
ವಿಚಾರಣೆ ನೆಪದಲ್ಲಿ ಠಾಣೆಗೆ ಕರೆದುಕೊಂಡು ಬಂದು ಪೊಲೀಸರು ಥಳಿಸಿದ ಕಾರಣ ಮರಳಸಿದ್ಧಪ್ಪ ಸಾವನ್ನಪ್ಪಿದ್ದರು ಎಂಬ ಆರೋಪ ಕುಟುಂಬದವರು ಹಾಗೂ ಸಂಬಂಧಿಕರಿಂದ ಕೇಳಿ ಬಂದಿತ್ತು. ಇನ್ನು ಮರಳಸಿದ್ದಪ್ಪ ಎರಡನೇ ಮದುವೆಯಾಗಿದ್ದ ಯುವತಿ ಹಾಗೂ ಆತನ ಮೊದಲ ಪತ್ನಿ ವೃಂದಮ್ಮ ಅವರಿಂದ ಮಾಹಿತಿಯನ್ನು ಸಿಐಡಿ ತಂಡ ಪಡೆಯುವ ಸಾಧ್ಯತೆ ಇದೆ.
ಮರಳಸಿದ್ದಪ್ಪ ಬಗೆಗಿನ ವೈಯಕ್ತಿಕ ಮಾಹಿತಿ ಕಲೆ ಹಾಕಿರುವ ಸಿಐಡಿ ತಂಡ, ಗಂಡು ಮಗು ಪಡೆಯುವ ಸಲುವಾಗಿ ಮರಳಸಿದ್ಧಪ್ಪ ಎರಡನೇ ವಿವಾಹವಾಗಿದ್ದ ಎನ್ನಲಾಗಿದೆ. ತನ್ನ ಸಂಬಂಧಿಕರಲ್ಲಿಯೇ ಓರ್ವ ಯುವತಿಯನ್ನು ಮದುವೆಯಾಗಿದ್ದು, ಮೊದಲ ಪತ್ನಿಯ ಪುತ್ರಿ ಬಾಣಂತಿಯಿದ್ದು, ಮೊಮ್ಮಗಳಿದ್ದರೂ ಸಹ ಮರಳಸಿದ್ಧಪ್ಪ 2 ನೇ ಮದುವೆಯಾಗಿದ್ದ ಎಂಬ ಚರ್ಚೆ ಕುಟುಂಬದಲ್ಲಿ ಮೂಡಿತ್ತು. ಈ ಬಗ್ಗೆ ಸ್ಥಳೀಯ ಮುಖಂಡರು ಇಬ್ಬರನ್ನು ಕೂರಿಸಿ ಚರ್ಚಿಸಿ ಸದ್ಯಕ್ಕೆ ವಿವಾದ ಆಗದಂತೆ ನೋಡಿಕೊಂಡಿದ್ದಾರೆ ಎನ್ನಲಾಗಿದೆ ಎಂದು ಸಿಐಡಿ ತಂಡಕ್ಕೆ ಮಾಹಿತಿ ಲಭ್ಯವಾಗಿದೆ.
ಈ ಎಲ್ಲಾ ಆಧಾರಗಳನ್ನಿಟ್ಟುಕೊಂಡು ಹಾಗೂ ವಿವಿಧ ಆಯಾಮಗಳಿಂದ ಸಿಐಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳು ಠಾಣೆಯೊಳಗೆ ಥಳಿಸಿ ಮರಳಸಿದ್ಧಪ್ಪ ಸಾವನ್ನಪ್ಪಿದ ಬಳಿಕ ಬಸ್ ನಿಲ್ದಾಣದ ಬಳಿ ಮೃತದೇಹ ಸಾಗಿಸಿದ್ದರಾ ಎಂಬ ಬಗ್ಗೆಯೂ ಸಿಐಡಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.