ದಾವಣಗೆರೆ: ಬಿಜೆಪಿ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ಸಾಲ ಮನ್ನಾ ಮಾಡಲು ಇಲ್ಲೇನು ನೋಟ್ ಪ್ರಿಂಟ್ ಮಾಡುವ ಯಂತ್ರ ಇಲ್ಲ ಎಂದಿದ್ದ ಯಡಿಯೂರಪ್ಪರಿಂದ ಏನನ್ನು ನಿರೀಕ್ಷಿಸಲು ಆಗುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆಯುತ್ತಿದ್ದ ವಾಲ್ಮೀಕಿ ಜಾತ್ರೆಯಲ್ಲಿ ಪಾಲ್ಗೊಳ್ಳುವ ಮುನ್ನ ಮಾತನಾಡಿದ ಅವರು, ನಮ್ಮ ಸರ್ಕಾರವಿದ್ದಾಗಲೂ ಹಣ ಎಲ್ಲಿತ್ತು? ಕುಮಾರಸ್ವಾಮಿ, ಯಡಿಯೂರಪ್ಪ ಸಿಎಂ ಆದ ಮೇಲೆ ರಾಜ್ಯದ ಬೊಕ್ಕಸದಲ್ಲಿ ಹಣವಿಲ್ಲ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕಳೆದ ಬಾರಿ 2 ಲಕ್ಷದ ಮೂವತ್ತನಾಲ್ಕು ಸಾವಿರ ಬಜೆಟ್ ಇತ್ತು. ಈ ಬಾರಿ ಎರಡೂವರೆ ಲಕ್ಷ ದಾಟಬಹುದು. ಬಡ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಕೊಡಲು ಮೂನ್ನೂರು ಕೋಟಿ ರೂಪಾಯಿ ಕೂಡ ಈ ಸರ್ಕಾರದ ಬಳಿ ಇಲ್ಲವೇ ಎಂದು ಅವರು ಪ್ರಶ್ನಿಸಿದರು. ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಈ ಯೋಜನೆ ಜಾರಿಗೊಳಿಸಿದ್ದೆ. ಶ್ರೀಮಂತರು ತಮ್ಮ ಮಕ್ಕಳಿಗೆ ಲ್ಯಾಪ್‌ಟಾಪ್ ಕೊಡಿಸುತ್ತಾರೆ. ಬಡ ವಿದ್ಯಾರ್ಥಿಗಳ ಪಾಡೇನು? ಇವರಿಗೆ ಲ್ಯಾಪ್‌ಟಾಪ್ ನೀಡುವುದನ್ನ ನಿಲ್ಲಿಸಲು ಹೊರಟಿರುವುದು ಸರಿಯಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ನಕಲಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಆರೋಪ ಮಾಡಿದ್ದ ಬಿಜೆಪಿ ನೂತನ ಸಚಿವ ಬಿ ಸಿ ಪಾಟೀಲ್ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಅವ್ನು ಏನು ಓದಿರೋದು. ಕಾನೂನು ಗೊತ್ತಾ ಅವ್ನಿಗೆ?. ಇಂಥ ಹೇಳಿಕೆ ನೀಡುವುದು ಸರಿಯಲ್ಲ' ಎಂದು ತಿರುಗೇಟು ನೀಡಿದರು.