ದಾವಣಗೆರೆ: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ವಾಪಸ್ ಪಡೆಯುವಂತೆ ಆಗ್ರಹಿಸಿ ಭಾರತೀಯ ಜನತಾ ವೇದಿಕೆಯು ಮಾರ್ಚ್ 13ರಂದು ಭಾರತ್ ಬಚಾವೋ ಆಂದೋಲನ ಹಮ್ಮಿಕೊಂಡಿದೆ.
ಈ ಬಗ್ಗೆ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಭಾರತೀಯ ಜನತಾ ವೇದಿಕೆಯ ಸಂಚಾಲಕ ಅಮಾನುಲ್ಲಾ ಖಾನ್, ಮಾ.13ರಂದು ಸಂಜೆ 5 ಗಂಟೆಗೆ ಮಾಗಾನಹಳ್ಳಿ ರಸ್ತೆಯ ಮಿಲಾದ್ ಮೈದಾನದಲ್ಲಿ ಆಂದೋಲನ ಕಾರ್ಯಕ್ರಮ ನಡೆಯಲಿದೆ. ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಪ್ರೊ. ಸುಷ್ಮಾ ಆಂದ್ರೆ, ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ, ಹೆಚ್. ಆಂಜನೇಯ ಸೇರಿದಂತೆ ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಶಾಂತಿಯುತವಾಗಿ ಕಾರ್ಯಕ್ರಮ ನಡೆಯಲಿದ್ದು, ಪ್ರಚೋದನಕಾರಿ ಭಾಷಣ ಮಾಡದಂತೆ ಈಗಾಗಲೇ ಭಾಷಣಕಾರರಿಗೆ ಹೇಳಲಾಗಿದೆ. ಯಾವುದೇ ಗದ್ದಲ, ಗಲಾಟೆ ಇಲ್ಲದೇ ಕಾರ್ಯಕ್ರಮ ನಡೆಸುತ್ತೇವೆ ಎಂದು ತಿಳಿಸಿದ ಅವರು, ದೇಶಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿರುವ ಎನ್ಆರ್ಸಿ ಹಾಗೂ ಸಿಎಎ ಅನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.