ದಾವಣಗೆರೆ: ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಇಲ್ಲ ಹುಡುಕಾಡುತ್ತಿದ್ದಾರೆ, ಕಾಂಗ್ರೆಸ್ ನವರು ಅವರ ಬೆನ್ನನ್ನು ಅವರೇ ತಟ್ಟಿಕೊಳ್ಳಬೇಕೆಂದು ಕೃಷಿ ಸಚಿವ ಬಿ ಸಿ ಪಾಟೀಲ್ ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಇನ್ನೂ ಕ್ಷೇತ್ರವೇ ಇಲ್ಲ ಅದನ್ನು ಹುಡುಕುತಿದ್ದಾರೆ. ಅವರ ಪಕ್ಷದಲ್ಲಿ ಅವರನ್ನು ಸೋಲಿಸಬೇಕು ಇವರನ್ನು ಸೋಲಿಸಬೇಕು ಎಂದು ಕಾಯುತ್ತಿದ್ದಾರೆ. ಪರಮೇಶ್ವರ್, ಎಂಬಿ ಪಾಟೀಲ್ಗೂ ಅಸಮಾಧಾನ ಶುರುವಾಗಿದೆ ಎಂದರು.
ಇನ್ನೂ ಪ್ರತಿ ಚುನಾವಣೆಯಲ್ಲಿ ಎದುರಾಳಿಯನ್ನು ಸೋಲಿಸಬೇಕು ಎಂದು ಎಲ್ಲರಿಗೂ ಇರುತ್ತೆ, ನಮ್ಮನ್ನು ಯಾರು ಸೋಲಿಸಬೇಕು ಎಂದು ಟಾರ್ಗೆಟ್ ಮಾಡ್ತಾರೋ ಅಂತಹವರನ್ನು ನಾವು ಸೋಲಿಸುತ್ತೇವೆ ಎಂದು ಮಾಜಿ ಶಾಸಕ ಯುಬಿ ಬಣಕಾರ್ ಸ್ಪರ್ಧೆ ವಿಚಾರವಾಗಿ ಮಾತನಾಡಿದರು. ಮುಂದುವರಿದು ಮಾತನಾಡಿದ ಅವರು, ಯುಬಿ ಬಣಕಾರ್ ಅವರನ್ನು ಹೊಸದಾಗಿ ನೋಡ್ತಾ ಇದೀನಾ, ಮೂರು ಬಾರಿ ಅವರನ್ನ ಸೋಲಿಸಿದ್ದೇನೆ, ಇದೇನು ಹೊಸದಲ್ಲ. ಹಿರೇಕೆರೂರು ಕ್ಷೇತ್ರದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಇದೆ. ಅಲ್ಲಿ ಪಕ್ಷೇತರ ಅಭ್ಯರ್ಥಿಗಳು ಮಾತ್ರ ಗೆಲುವು ಸಾಧಿಸುತ್ತಿದ್ದರು. 36 ವರ್ಷಗಳ ಕಾಲ ಕಾಂಗ್ರೆಸ್ ಅಲ್ಲಿ ಅಧಿಕಾರಕ್ಕೆ ಬಂದಿರಲಿಲ್ಲ, ನಾನು ಕಾಂಗ್ರೆಸ್ಗೆ ಬಂದಾಗ ಅದಕ್ಕೆ ಜೀವ ಕೊಟ್ಟು ಎರಡು ಬಾರಿ ಗೆಲಿಸಿದ್ದೇ. ಈಗ ಬಿಜೆಪಿಗೆ ಬಂದಿದ್ದೇನೆ ಬಿಜೆಪಿಯೇ ಗೆಲ್ಲುತ್ತದೆ ಎಂದರು.
ಇನ್ನು ಸಿಡಿ ವಿಚಾರದಲ್ಲಿ ಸ್ಟೇ ತೆಗೆದುಕೊಂಡು ಬಂದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗ ದುಷ್ಮನ್ ಕಹಾ ಹೇ ಎಂದರೆ ಬಗಲ್ ಮೇ ಹೇ ಅನ್ನೋ ತರ ಇದಾರೆ. ನಮ್ಮ ಹಿಂದೆ, ಮುಂದೆ ಅಕ್ಕಪಕ್ಕ ಹೇಗೆ ಇರ್ತಾರೆ ಅಂತ ಗೊತ್ತಾಗುವುದಿಲ್ಲ. ಇವಾಗ ಎಲೆಕ್ಟ್ರಾನಿಕ್ ಯುಗ ಏನನ್ನು ಬೇಕಾದರೂ ಮಾಡಬಹುದು. ನನ್ನ ಪಕ್ಕ ಯಾರನ್ನು ಬೇಕಾದ್ರು ಸೃಷ್ಟಿ ಮಾಡಬಹುದು. ಜನರು ನೆಗೆಟಿವ್ ಬಂದ ವಿಚಾರವನ್ನು ಮೊದಲು ತೆಗೆದುಕೊಳ್ಳುತ್ತಾರೆ. ಅಲ್ಲದೇ ನಮ್ಮ ಘನತೆ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಾರೆ. ಕೆಲ ಮಹಾನಾಯಕರು ನಮ್ಮ ಮೇಲೆ ಕೆಟ್ಟ ಹೆಸರು ತರಲು ಹೀಗೆ ಮಾಡ್ತಾರೆ, ಆದ್ದರಿಂದ ಗೌರವಾನ್ವಿತವಾಗಿ ಬದುಕಲು ನಾವು ಸ್ಟೇ ತೆಗೆದುಕೊಂಡು ಬಂದಿರುವುದಾಗಿ ಹೇಳಿದರು.
ನಾನು ಬಿಗಿ ಇದ್ದಿದ್ರೇ ಮಾಯಕೊಂಡದಲ್ಲಿ ಬಿಜೆಪಿ ಆಕಾಂಕ್ಷಿಗಳು ಹೆಚ್ಚಾಗ್ತಿರಲಿಲ್ಲ, ಇದು ನನ್ನ ದೊಡ್ಡ ತಪ್ಪು ಶಾಸಕ ಲಿಂಗಣ್ಣ: ನಾನು ಬಿಗಿ ಇದ್ದಿದ್ರೇ ಮಾಯಕೊಂಡದಲ್ಲಿ ಬಿಜೆಪಿ ಆಕಾಂಕ್ಷಿಗಳು ಹೆಚ್ಚಾಗ್ತಿರಲಿಲ್ಲ, ಇದು ನನ್ನ ದೊಡ್ಡ ತಪ್ಪು ಎಂದು ಮಾಯಕೊಂಡ ಮತಕ್ಷೇತ್ರದ ಬಿಜೆಪಿ ಶಾಸಕ ಪ್ರೋ ಲಿಂಗಣ್ಣ ಬೇಗುದಿ ಹೇಳಿದರು. ದಾವಣಗೆರೆ ತಾಲೂಕಿನ ಹುಡುಪಿನಕಟ್ಟೆ ಗ್ರಾಮದ ಬಳಿ ಇರುವ ಪ್ರಾದೇಶಿಕ ವಿಜ್ಞಾನ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೊದಲು ಮಾತನಾಡಿದ ಅವರು, ಬಿಜೆಪಿಯಲ್ಲಿ ನಾನು ಎಂಬುದಿಲ್ಲ, ನಾನು ಚುನಾವಣೆ ಸ್ಪರ್ಧೆ ವಿಚಾರದಲ್ಲಿ ಹೈಕಮಾಂಡ್ ಏನ್ ಹೇಳುತ್ತೋ ಹಾಗೇ ಕೇಳುವೆ. ಹೈಕಮಾಂಡ್ ಆದೇಶವೇ ಫೈನಲ್ ಎಂದು ಪ್ರೋ ಲಿಂಗಣ್ಣ ಹೇಳಿದರು.
ಚುನಾವಣೆ ಸ್ಪರ್ಧೆಗೆ ಕಾರ್ಯಕರ್ತರ ವಿರೋಧ ಇದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಾರ್ಯಕರ್ತರ ವಿರೋಧ ಇರುವುದು ಸಾಮಾನ್ಯ. ರಾಜಕೀಯದಲ್ಲಿ ಕಾಲು ಎಳೆಯುವುದು ಸಾಮಾನ್ಯವಾಗಿದೆ. ಅದಕ್ಕೆ ಏನೂ ಮಾಡಲು ಆಗುವುದಿಲ್ಲ. ನಾನು ಮೊದಲೇ ಹೇಳಿದ್ದೇನೆ ಸ್ಪರ್ಧಿಸಲು ಆಸಕ್ತಿ ಇಲ್ಲ ಎಂದು, ಆದರೂ ಹೈಕಮಾಂಡ್ ಚುನಾವಣೆಗೆ ಸ್ಪರ್ಧಿಸಲೇಬೇಕೆಂದು ಹೇಳಿದರೇ ನಿಲ್ಲಲೇಬೇಕಾಗುತ್ತದೆ ಎಂದರು.
ಇದನ್ನೂ ಓದಿ: ನನ್ನವರು ನನಗೆ ಮೋಸ ಮಾಡಿದ್ರು, ರೆಡ್ಡಿ ಸಿಎಂ ಆಗುವನೆಂದು ಜೈಲಿನಲ್ಲಿಟ್ಟರು: ಗಾಲಿ ಜನಾರ್ದನ ರೆಡ್ಡಿ