ದಾವಣಗೆರೆ: ಹರಿಹರದ ಜನತಾ ಸೌಹಾರ್ದ ಸಹಕಾರಿ ನಿಯಮಿತದಲ್ಲಿ 97 ಸಾವಿರ ಮತ್ತು ಪ್ರಾಥಮಿಕ ಸಹಕಾರ ಕೃಷಿ ಮತ್ತು ಭೂ ಅಭಿವೃದ್ಧಿ ನಿಯಮಿತ ಬ್ಯಾಂಕಿನ 7 ಲಕ್ಷ ಹಣವಿದ್ದ ಟ್ರಜರಿಯನ್ನು ಅಪಹರಿಸಲು ಯತ್ನಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಹರಿಹರದ ಪಿ.ಬಿ ರಸ್ತೆಯ ಪಕ್ಕದಲ್ಲಿರುವ ಒಂದೇ ಕಟ್ಟಡದಲ್ಲಿದ್ದ ಈ ಎರಡೂ ಬ್ಯಾಂಕಿಗೆ ಖದೀಮರು ಮಂಗಳವಾರ ರಾತ್ರಿ ಬ್ಯಾಂಕ್ ಮೇಲ್ಭಾಗದ ಕದವನ್ನು ಒಡೆದು ಒಳ ನುಸುಳಿದ್ದಾರೆ. ಜನತಾ ಸೌಹಾರ್ದ ಸಹಕಾರಿ ನಿಯಮಿತದಲ್ಲಿ 97 ಸಾವಿರ ನಗದು ಹಣವನ್ನು ದೋಚಿಕೊಂಡ ಕಳ್ಳರು, ಮೇಲ್ಭಾಗದ ಪಿ.ಎಲ್.ಡಿ ಬ್ಯಾಂಕಿನ ಬಾಗಿಲು ಮುರಿದು 7 ಲಕ್ಷ ಇದ್ದ ಟ್ರಜರಿಯನ್ನು ಎತ್ತಿಕೊಂಡು ಮೇಲ್ಛಾವಣಿಗೆ ತೆರಳುವ ವೇಳೆ ಟ್ರಜರಿ ಸಿಲಿಕಿಕೊಂಡ ಕಾರಣ ಅದನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಬ್ಯಾಂಕುಗಳಲ್ಲಿ ಕೆಲಸ ಮಾಡುವವರು ಎಂದಿನಂತೆ ಕಚೇರಿಗೆ ಬಂದಾಗ ಬ್ಯಾಂಕ್ಗಳ ಬಾಗಿಲು ಒಡೆದಿರುವುದನ್ನು ಗಮನಿಸಿ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿ ರಾಜೀವ್ ಎಂ., ಸಿಪಿಐ ಗುರುನಾಥ್, ಪಿಎಸ್‌ಐ ರವಿಕುಮಾರ್ ಡಿ. ಭೇಟಿ ನೀಡಿ ಸ್ಥಳ ಪರಿಶೀಲಿಸಿ, ಹರಿಹರ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಎರಡೂ ಬ್ಯಾಂಕುಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಿಲ್ಲ. ಬ್ಯಾಂಕ್ಗಳನ್ನು ನಿರ್ಮಿಸುವಾಗ ಅಲ್ಲಿನ ಭದ್ರತೆಗಳನ್ನು ಮುಖ್ಯಸ್ಥರು ಗಮನಿಸಬೇಕು. ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸುವಂತೆ ಬ್ಯಾಂಕ್ಗಳ ಮುಖ್ಯಸ್ಥರಿಗೆ ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿ ರಾಜೀವ್ ಎಂ. ಸೂಚಿಸಿದರು.