ಹರಿಹರ : ಕೇಂದ್ರ, ರಾಜ್ಯ ಸರ್ಕಾರಗಳು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವವರೆಗೂ ಸೇವೆ ಸ್ಥಗಿತಗೊಳಿಸುವುದಾಗಿ ಆಶಾ ಕಾರ್ಯಕರ್ತೆಯರ ತಾಲೂಕು ಸಂಘಟನೆ ಮುಖಂಡರು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು, ವಿವಿಧ ಬೇಡಿಕೆ ಈಡೇರಿಕೆಗೆ ಕಳೆದ ಹಲವು ತಿಂಗಳಿನಿಂದ ಒತ್ತಾಯಿಸಿದ್ದರೂ ಸಹ ಸರ್ಕಾರ ಸ್ಪಂದಿಸದ ಕಾರಣ ಅನಿರ್ದಿಷ್ಟಾವಧಿಯವರೆಗೆ ಸೇವೆ ಸ್ಥಗಿತಗೊಳಿಸಿರುವುದಾಗಿ ಘೋಷಿಸಿದರು.
ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಕೊರೊನಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಸರ್ಕಾರ ಅಗತ್ಯ ಸ್ಯಾನಿಟೈಸರ್, ಉತ್ತಮ ದರ್ಜೆಯ ಮಾಸ್ಕ್, ಗ್ಲೌಸ್, ಫೇಸ್‌ಶೀಲ್ಡ್ ಸಾಧನಗಳನ್ನು ಒದಗಿಸುತ್ತಿಲ್ಲ. ಕನಿಷ್ಠ ಗೌರವಧನ ನೀಡುತ್ತಿಲ್ಲ. ಸರ್ಕಾರದ ಚಪ್ಪಾಳೆ, ಹೂಮಳೆ ನಮಗೆ ಬೇಕಿಲ್ಲ. ಬದಲಿಗೆ ಅಗತ್ಯ ಸೌಕರ್ಯಗಳು ಬೇಕು. ಕನಿಷ್ಠ ಗೌರವಧನ ಬೇಕೆಂದು ಆಗ್ರಹಿಸಿದರು.
ಕಳೆದ ಮಾರ್ಚ್‌ನಿಂದ ಹತ್ತಕ್ಕೂ ಹೆಚ್ಚು ಬಾರಿ ಸಿಎಂ, ಆರೋಗ್ಯ ಸಚಿವರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದರೂ ಸಹ ಯಾವುದೇ ಪ್ರತಿಕ್ರಿಯೆ ನೀಡದ ಅನಿವಾರ್ಯವಾಗಿ ಸೇವೆ ಸ್ಥಗಿತಗೊಳಿಸುತ್ತಿದ್ದೇವೆ. ಮಾಸಿಕ ಕನಿಷ್ಠ 12 ಸಾವಿರ ಗೌರವ ಧನ ನೀಡುವುದು ಸೇರಿ ನಮ್ಮ ಬೇಡಿಕೆ ಈಡೇರಿಸುವವರೆಗೂ ತಾಲೂಕಿನ ಯಾವುದೇ ಆಶಾ ಕಾರ್ಯಕರ್ತೆಯರು ಸೇವೆಗೆ ಹಾಜರಾಗುವುದಿಲ್ಲ ಎಂದರು.